×
Ad

ಕಲಬುರಗಿ ನಗರಕ್ಕೆ ಕಲುಷಿತ ನೀರು: ಮಹಾಪೌರ, ಆಯುಕ್ತರಿಂದ ಸ್ಪಷ್ಟನೆ

Update: 2026-01-31 22:51 IST

ಕಲಬುರಗಿ, ಜ.31: ಭೀಮಾ ಬ್ಯಾರೇಜ್‌ನಿಂದ ಕಲಬುರಗಿ ನಗರಕ್ಕೆ ನೀರು ಸರಬರಾಜು ಮಾಡುತ್ತಿರುವ ಶುದ್ಧೀಕರಣ ಘಟಕದಲ್ಲಿ ಯಂತ್ರಗಳಲ್ಲಿ ದೋಷಗಳು ಕಾಣಿಸಿಕೊಂಡಿದ್ದರಿಂದ ಕಲುಷಿತ ನೀರು ಸರಬರಾಜು ಆಗಿದೆ. ಹಾಗಾಗಿ ನೀರು ಪೂರೈಕೆ ಸ್ಥಗಿತಗೊಳಿಸಲಾಗಿತ್ತು ಎಂದು ಕಲಬುರಗಿ ಮಹಾನಗರ ಪಾಲಿಕೆಯ ಮಹಾಪೌರ ವರ್ಷಾ ಜಾನೆ ಹಾಗೂ ಪಾಲಿಕೆ ಆಯುಕ್ತ ಅವಿನಾಶ್ ಶಿಂಧೆ ಅವರು ಸ್ಪಷ್ಟನೆ ನೀಡಿದ್ದಾರೆ.

ಶುಕ್ರವಾರ ಪಾಲಿಕೆಯ ಕಚೇರಿಯಲ್ಲಿ ಜಂಟಿಯಾಗಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಶುದ್ಧೀಕರಣ ಘಟಕದಲ್ಲಿ ತಾಂತ್ರಿಕ ತೊಂದರೆಯಾಗಿರುವ ಕಾರಣ ಹಾಳಾಗಿರುವ ಯಂತ್ರ ಸ್ಥಳೀಯವಾಗಿ ಲಭ್ಯವಿರಲಿಲ್ಲ. ಹಾಗಾಗಿ ಅವುಗಳನ್ನು ಮಹಾರಾಷ್ಟ್ರದ ಪುಣೆ, ಗುಜರಾತ್ ಕಡೆಗಳಿಂದ ತರಿಸಿ ಅಳವಡಿಸಲಾಗಿದೆ. ರವಿವಾರದಿಂದ ಮತ್ತೆ ಶುದ್ಧ ನೀರು ನಗರಕ್ಕೆ ಸರಬರಾಜು ಮಾಡಲಾಗುತ್ತಿದೆ ಎಂದರು.

ಕಳೆದ ಒಂದು ವಾರದಿಂದ ಯಂತ್ರಗಳು ಕೆಟ್ಟು ಹೋಗಿದ್ದರಿಂದ ನೀರು ಸಮರ್ಪಕವಾಗಿ ಶುದ್ಧೀಕರಣ ಆಗುತ್ತಿರಲಿಲ್ಲ. ಹಾಗಾಗಿ ಕಲುಷಿತ ನೀರು ಸರಬರಾಜು ಆಗಿತ್ತು. ಇದನ್ನು ಎಚ್ಚೆತ್ತುಕೊಂಡೇ ನಾವು ನೀರು ಸರಬರಾಜು ಮಾಡುವುದನ್ನು ನಿಲ್ಲಿಸಿದ್ದೆವು. ಈಗ ಉತ್ತಮ ಯಂತ್ರಗಳ ಅಳವಡಿಕೆ ಮಾಡಿರುವುದರಿಂದ ಯೋಗ್ಯ ನೀರು ಸಿಗಲಿದೆ ಎಂದು ವಿವರಿಸಿದರು.

ಕಳೆದ ಒಂದು ವಾರದಿಂದ ನೀರಿನ ಪೂರೈಕೆ ಆಗದೆ ಇರುವುದರಿಂದ ಹೆಚ್ಚಿನ ಕಡೆಗಳಲ್ಲಿ ಟ್ಯಾಂಕರ್ ನೀರು ಸರಬರಾಜು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ನಿವಾಸಿಗಳಿಗೆ ತೊಂದರೆಯಾಗದಂತೆ ಸಮರ್ಪಕ ನೀರು ಒದಗಿಸುವಲ್ಲಿ ಪಾಲಿಕೆ ಶ್ರಮಿಸುತ್ತಿದೆ ಎಂದ ಪಾಲಿಕೆ ಆಯುಕ್ತರು, ಕೊಳವೆ ಬಾವಿ ದುರಸ್ತಿ, ಹೊಸ ಕೊಳವೆ ಬಾವಿ ಕೊರೆಯುವುದು ಸೇರಿದಂತೆ ಶುದ್ಧ ನೀರಿನ ಘಟಕಗಳ ಅಳವಡಿಕೆ, ಕಾರ್ಯವೂ ನಡೆಯುತ್ತಿದೆ ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News