×
Ad

ಅಫಜಲಪುರ | ಷಟ್ಪಥ ಹೆದ್ದಾರಿಗೆ ಅಂಡರ್‌ಪಾಸ್, ಫ್ಲೈಓವರ್ ನಿರ್ಮಿಸುವಂತೆ ಆಗ್ರಹ

Update: 2026-01-31 20:34 IST

ಅಫಜಲಪುರ : ಸುರತ್–ಚನ್ನೈ ಸಂಪರ್ಕಿಸುವ 6 ಪಥದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅಫಜಲಪುರ ತಾಲೂಕಿನ ಬಡದಾಳ ಗ್ರಾಮದಿಂದ ಕರ್ನಾಟಕಕ್ಕೆ ಪ್ರವೇಶಿಸುತ್ತಿರುವ ಹಿನ್ನೆಲೆ, ಬಡದಾಳದಿಂದ ಕುಲಾಲಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ಅಂಡರ್‌ಪಾಸ್ ಅಥವಾ ಫ್ಲೈಓವರ್ ನಿರ್ಮಿಸಬೇಕು ಎಂದು ಬಡದಾಳ ಗ್ರಾಮದ ರೈತರು ಆಗ್ರಹಿಸಿ ಪ್ರತಿಭಟನೆ ನಡೆಸಿದರು.

ಷಟ್ಪಥ ಹೆದ್ದಾರಿ ನಿರ್ಮಾಣದಿಂದ ಅಡ್ಡಿಯಾಗಿರುವ ಬಡದಾಳ–ಕುಲಾಲಿ ಪುರಾತನ ರಸ್ತೆ ಬಳಿ ರೈತರು ಸೇರಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಈ ರಸ್ತೆ ಬಡದಾಳ ಮತ್ತು ಕುಲಾಲಿ ಗ್ರಾಮಗಳಿಗೆ ಪ್ರಮುಖ ಸಂಪರ್ಕ ಮಾರ್ಗವಾಗಿದ್ದು, ಹೆದ್ದಾರಿಯ ಆಚೆ ಭಾಗದಲ್ಲಿರುವ ಒಡ್ಡಿಕೆರೆ ಮೇಲ್ಭಾಗದಲ್ಲಿ 2 ಸಾವಿರಕ್ಕೂ ಅಧಿಕ ಎಕರೆ ಕೃಷಿ ಭೂಮಿ ಇದೆ ಎಂದು ರೈತರು ತಿಳಿಸಿದ್ದಾರೆ.

ಹೆದ್ದಾರಿ ನಿರ್ಮಾಣವಾದ ಬಳಿಕ ಕುಲಾಲಿ ಕಡೆ ಹೋಗಲು ಕೆರೆ ನೀರು ಹರಿಯಲು ನಿರ್ಮಿಸಿರುವ ಅಂಡರ್‌ಪಾಸ್ ಬಳಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಅದರ ಎತ್ತರ ಕಡಿಮೆ ಇರುವುದರಿಂದ ಹಾಗೂ ಮಳೆಗಾಲದಲ್ಲಿ ಕೆರೆ ಮತ್ತು ದೊಡ್ಡ ಹಳ್ಳದಿಂದ ನೀರು ತುಂಬಿ ಹರಿಯುವುದರಿಂದ ನಡೆದುಕೊಂಡು ಹೋಗುವುದಕ್ಕೂ ಸಾಧ್ಯವಾಗುತ್ತಿಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ಈ ಅಂಡರ್‌ಪಾಸ್‌ನಿಂದಾಗಿ ಕೃಷಿ ಚಟುವಟಿಕೆಗಳಿಗೆ ತೀವ್ರ ತೊಂದರೆ ಉಂಟಾಗಿದೆ. ಕಬ್ಬು ಸೇರಿದಂತೆ ವಾಣಿಜ್ಯ ಬೆಳೆಗಳನ್ನು ಸಾಗಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಈ ಭಾಗದಲ್ಲಿ ಶಾಶ್ವತವಾಗಿ ವಾಣಿಜ್ಯ ಬೆಳೆ ಬೆಳೆಯಲು ಅಸಾಧ್ಯವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಈ ಸಮಸ್ಯೆಯ ಕುರಿತು ಜಿಲ್ಲಾಧಿಕಾರಿಗಳು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಗುತ್ತಿಗೆದಾರರು ಹಾಗೂ ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರೂ, ರೈತರ ಸಮಸ್ಯೆಗೆ ಸ್ಪಷ್ಟ ಪರಿಹಾರ ನೀಡಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.

ಪ್ರಗತಿಯಲ್ಲಿರುವ ಹೆದ್ದಾರಿ ಕಾಮಗಾರಿಯಲ್ಲಿ ದೊಡ್ಡ ಮಟ್ಟದ ಅಂಡರ್‌ಪಾಸ್ ಅಥವಾ ಫ್ಲೈಓವರ್ ತಕ್ಷಣ ನಿರ್ಮಿಸಬೇಕು. ಇಲ್ಲದಿದ್ದರೆ ಹೆದ್ದಾರಿ ಕಾಮಗಾರಿ ತಡೆದು ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ರೈತರು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಶಿವಾನಂದ ನಿಲಂಗಿ, ರೇವಣಸಿದ್ದ ಕಲಶೆಟ್ಟಿ, ರಾವುತ್ ಸಾಲೇಗಾಂವ, ಬಾಬು ನಿಲಂಗಿ, ಶಾಂತ ಮಂಗಳೂರು, ಈರಣ್ಣ ಮಂಗಳೂರು, ಶ್ರೀಶೈಲ್ ಮಂಗಳೂರು, ಹಣಮಂತ ತೋಟನಾಕ, ಕಲ್ಲಪ್ಪ ಸಾಲೇಗಾಂವ, ಹಣಮಂತ ಮಂಗಳೂರು, ವಿಠ್ಠಲ್ ನಿಲಂಗಿ, ಸಿದ್ದಣ್ಣ ನಿಲಂಗಿ, ಹುಲೇಪ್ಪ ನಾಟಿಕಾರ, ಸುರೇಶ ನಿಲಂಗಿ, ಮೇಹಂದಿಶಾ ರೇವೂರ, ಬಾಬು ಖತಲಮಡ್ಡಿ, ಸಿದ್ದಣ್ಣ ಕುರುಬತಳ್ಳಿ, ಶಿವಲಿಂಗಪ್ಪ ಅಗಸಿಮನಿ ಸೇರಿದಂತೆ ಅನೇಕ ರೈತರು ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News