×
Ad

ಕಲಬುರಗಿ| ನಾಗರಿಕ ಸ್ನೇಹಿಯಾಗಿ ಇ-ಸ್ವತ್ತು ತಂತ್ರಾಂಶ: ಸಚಿವ ಪ್ರಿಯಾಂಕ್ ಖರ್ಗೆ

Update: 2025-12-06 20:38 IST

ಕಲಬುರಗಿ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯು ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ ನಿಯಮಗಳು-2025ರ ಅಧಿಸೂಚನೆ ಹೊರಡಿಸಿದ್ದು, ಈ ಹಿಂದೆ ಇದ್ದ ಇ-ಸ್ವತ್ತು ತಂತ್ರಾಂಶವನ್ನು ನಾಗರಿಕ ಸ್ನೇಹಿಯಾಗಿ ಮಾರ್ಪಡಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಡಿ.1ರಂದು ಮುಖ್ಯ ಮಂತ್ರಿಗಳು ಹಾಗೂ ಉಪ ಮುಖ್ಯ ಮಂತ್ರಿಗಳು ಇ-ಸ್ವತ್ತು 2.O ತಂತ್ರಾಂಶಕ್ಕೆ ಚಾಲನೆ ನೀಡಿದ್ದು, ನಿಯಮಗಳಿಗೆ ಹಾಗೂ ಇ-ಸ್ವತ್ತು ತಂತ್ರಾಂಶದ ಬಳಕೆಗೆ ಸಂಬಂಧಿಸಿದಂತೆ ಸಾರ್ವಜನಿಕರ ಸಹಾಯಕ್ಕಾಗಿ ಇಲಾಖೆಯಿಂದ ಸಹಾಯವಾಣಿಯನ್ನು ಪ್ರಾರಂಭಿಸಲಾಗಿದೆ. ಪ್ರತಿದಿನ ಮೂರು ಸಾವಿರಕ್ಕೂ ಹೆಚ್ಚು ಕರೆಗಳನ್ನು ಸಾರ್ವಜನಿಕರಿಂದ ಸ್ವೀಕರಿಸಲಾಗುತ್ತಿದೆ ಎಂದು ಹೇಳಿದರು.  

ಸಹಾಯವಾಣಿಗೆ ಸಾರ್ವಜನಿಕರಿಂದ ಸ್ವೀಕೃತಿಯಾಗುತ್ತಿರುವ ಪ್ರಶ್ನೆಗಳಲ್ಲಿ ಹೆಚ್ಚಿನ ಪ್ರಶ್ನೆಗಳು ಅರ್ಜಿ ಸಲ್ಲಿಸುವ ಪ್ರಕ್ರಿಯೆ, ಅನುಮೋದನೆ ಪ್ರಕ್ರಿಯೆ, ಆಸ್ತಿ ವರ್ಗೀಕರಣವನ್ನು ಆಯ್ಕೆ ಮಾಡುವ ವಿಧಾನ, ಇ-ಸ್ವತ್ತು ನಮೂನೆ ವಿತರಿಸಲು ನಿಗದಿಯಾಗಿರುವ ಕಾಲಾವಧಿ ಹಾಗೂ ತಾಂತ್ರಿಕ ಸಮಸ್ಯೆಗಳಿಗೆ ಸಂಬಂಧಿಸಿದ್ದಾಗಿರುತ್ತವೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಇ-ಸ್ವತ್ತು ಪ್ರಕ್ರಿಯೆ ಹಾಗೂ ತಂತ್ರಾಂಶವನ್ನು ಹೆಚ್ಚು ನಾಗರಿಕ ಸ್ನೇಹಿಯಾಗಿ ಅನುಷ್ಠಾನಗೊಳಿಸಲು ಇಲಾಖೆ ಬದ್ಧವಾಗಿದೆ. ಅದರನ್ವಯ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿರುತ್ತದೆ. ಇವರೆಗೆ 365 ಅರ್ಜಿಗಳನ್ನು ಆನ್‌ಲೈನ್‌ ಮೂಲಕ ಸ್ವೀಕರಿಸಲಾಗಿದ್ದು ಮತ್ತಷ್ಟು ಸರಳೀಕರಿಸಲು ಕ್ರಮವಹಿಸಲಾಗುತ್ತಿದೆ. ಸಾರ್ವಜನಿಕರು ಆತಂಕ ಪಡುವ ಅವಶ್ಯಕತೆ ಇರುವುದಿಲ್ಲ. ಸಾರ್ವಜನಿಕರಿಗೆ ಅರ್ಜಿ ಸಲ್ಲಿಸಲು ಯಾವುದೇ ಕಾಲಾವಧಿಯನ್ನು ನಿಗದಿಪಡಿಸಲಾಗಿರುವುದಿಲ್ಲ. ಗ್ರಾಮ ಪಂಚಾಯಿತಿಗೆ ಭೇಟಿ ನೀಡದೆಯೇ ತಾವಿರುವಲ್ಲಿಯೇ ತಮ್ಮ ಆಸ್ತಿಗೆ ಸಂಬಂಧಿಸಿದಂತೆ ನಮೂನೆಗಳನ್ನು ಇ-ಸ್ವತ್ತು ತಂತ್ರಾಂಶದ ಮೂಲಕ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಈ ಕುರಿತ ಸಮಸ್ಯೆ, ಸಂದೇಹಗಳನ್ನು ಬಗೆಹರಿಸಲು ಸರಕಾರ ಬದ್ದವಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.   

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News