×
Ad

ಅಂಬೇಡ್ಕರ್ ಅವರ ಬದುಕು, ಬರಹಗಳು ಸಂಶೋಧನೆಗೆ ಸ್ಪೂರ್ತಿ: ಪ್ರೊ. ಶಶಿಕಾಂತ್‌ ಎಸ್. ಉಡಿಕೇರಿ

Update: 2025-12-06 22:12 IST

ಕಲಬುರಗಿ : ಮಹಾನ್ ಮಾನವತಾವಾದಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಬದುಕು ಮತ್ತು ಬರಹಗಳು ನೈಜತೆಯಿಂದ ಕೂಡಿದೆ. ವಾಸ್ತವಾಂಶಗಳಿoದ ಕೂಡಿದ ಚಿಂತನೆ ಮತ್ತು ವಿಚಾರಗಳ ತಾತ್ವಿಕ ನೆಲೆಯನ್ನು ವಿದ್ಯಾರ್ಥಿ ಸಮೂಹ ಅರ್ಥಮಾಡಿಕೊಂಡರೆ ಮಾತ್ರ ಅವರ ಬದುಕು ಮತ್ತು ಬರಹಗಳ ಅಧ್ಯಯನ ಮತ್ತು ಸಂಶೋಧನೆಗೆ ಸ್ಪೂರ್ತಿ ಸಿಗಲಿದೆ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶಶಿಕಾಂತ್‌ ಎಸ್. ಉಡಿಕೇರಿ ಹೇಳಿದ್ದಾರೆ. 

ಗುಲಬರ್ಗಾ ವಿಶ್ವವಿದ್ಯಾಲಯದ ಡಾ.ಬಿ.ಆರ್. ಅಂಬೇಡ್ಕರ್ ಅಧ್ಯಯನ ಹಾಗೂ ಸಂಶೋಧನಾ ಸಂಸ್ಥೆಯ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಆಯೋಜಿಸಿದ  ಡಾ. ಬಿ.ಆರ್. ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರೊ. ಶಶಿಕಾಂತ್‌ ಎಸ್. ಉಡಿಕೇರಿ, ಅಮೆರಿಕ ಮತ್ತು ಇನ್ನಿತರ ದೇಶಗಳಲ್ಲಿ ಶಾಂತಿ ಎಂದರೆ ಗಾಂಧಿ, ಸಮಾನತೆ ಎಂದರೆ ಡಾ. ಬಿ. ಆರ್. ಅಂಬೇಡ್ಕರ್ ಎಂಬ ವಿಚಾರಗಳು ಚರ್ಚೆಯಾಗುತ್ತಿವೆ ಎಂದು ಹೇಳಿದರು.  

ಬೆಂಗಳೂರು ವಿಶ್ವವಿದ್ಯಾಲಯದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಹಾಗೂ ಗ್ರಂಥಪಾಲಕ ಡಾ. ರಘುನಂದನ್ ಅವರು ಮುಖ್ಯ ಅತಿಥಿಯಾಗಿ ಮಾತನಾಡಿ, ಸಮಾಜದಲ್ಲಿ ಮೌಢ್ಯವನ್ನು ಎತ್ತಿಹಿಡಿಯುವ ಹುನ್ನಾರ ನಡೆಯುತ್ತಿದೆ. ದೇಶಭಕ್ತಿ ಹೆಸರಿನಲ್ಲಿ ಜಾತಿ ಜಾತಿಗಳ ನಡುವೆ, ಧರ್ಮ ಧರ್ಮಗಳ ನಡುವೆ ಮತ್ತು ವರ್ಗ ವರ್ಗಗಳ ನಡುವೆ ಸಂಘರ್ಷ ಭಾವನೆ ಬೆಳೆಸಲು ಯತ್ನಿಸಲಾಗುತ್ತಿದೆ. ಕೆಲವು ಸಮಾಜ ವಿರೋಧಿ ಶಕ್ತಿಗಳು ವಿಷ ಬೀಜವನ್ನು ಬಿತ್ತುತ್ತಿವೆ. ಬುದ್ಧನ ಮಾರ್ಗದಲ್ಲಿ ನಡೆದ ಡಾ. ಬಿ.ಆರ್. ಅಂಬೇಡ್ಕರ್‌ ಅವರ ಸಮಾನತೆ, ಸಹೋದರತೆ ಸಂದೇಶಗಳನ್ನು ಅರ್ಥ ಮಾಡಿಕೊಳ್ಳಬೇಕಿದೆ ಎಂದು ಹೇಳಿದರು.  

ಶೂದ್ರರು ಬ್ರಹ್ಮನ ಕಾಲಿನಿಂದ ಹುಟ್ಟಿದ್ದು ಎಂದು ಹೇಳಿದ ದಿನದಿಂದಲೇ ಅಸಮಾನತೆ ಬೆಳೆದಿದೆ. ಬುದ್ಧ, ಬಸವ ಮತ್ತು ಡಾ. ಬಿ.ಆರ್. ಅಂಬೇಡ್ಕರ್, ಜ್ಯೋತಿಬಾ ಪುಲೆ, ರಾಜಾರಾಂ ಮೋಹನರಾಯ್, ದಯಾನಂದ ಸರಸ್ವತಿ ಇಂತಹ ಮಹನೀಯರ ಹುಟ್ಟಿನಿಂದ ಸಮಾಜದಲ್ಲಿನ ಮೌಢ್ಯತೆ, ಅಜ್ಞಾನ ಮತ್ತು ಅಮಾನವೀಯ ಪದ್ಧತಿ ಮತ್ತು ಅವೈಜ್ಞಾನಿಕ ಪಿಡುಗುಗಳ ನಿವಾರಣೆ ಸಾಧ್ಯವಾಗಿದೆ. ಆದರೆ, ಇಂದು ಸರ್ವಾಧಿಕಾರ ಮನೋಭಾವ ಬೆಳೆಸಿಕೊಂಡವರು ಧರ್ಮವನ್ನು ಮುನ್ನಲೆಗೆ ತಂದು ಜನರ ತಲೆಗೆ ತುಂಬುತ್ತಿದ್ದಾರೆ. ಯುವಕರಿಗೆ ತಪ್ಪು ತಿಳುವಳಿಕೆ ಮೂಡಿಸುವ ಕೆಲ ಗುಂಪುಗಳು ಇಡೀ ಸಮಾಜಕ್ಕೆ ಅಪಾಯ ತಂದೊಡ್ಡುತ್ತಿವೆ. ಪ್ರಜ್ಞಾವಂತರು ಈ ಹುನ್ನಾರವನ್ನು ಅರಿತು ಪ್ರಶ್ನಿಸುವ ಸಾಮರ್ಥ್ಯ ಕಂಡುಕೊಳ್ಳಬೇಕು ಎಂದು ಹೇಳಿದರು.  

ಡಾ. ಬಿ. ಆರ್. ಅಂಬೇಡ್ಕರ್ ಅಧ್ಯಯನ ಹಾಗೂ ಸಂಶೋಧನಾ ಸಂಸ್ಥೆಯ ನಿರ್ದೇಶಕ ಪ್ರೊ. ಚಂದ್ರಕಾಂತ ಯಾತನೂರು  ಮಾತನಾಡಿ, ಡಾ. ಬಿ. ಆರ್. ಅಂಬೇಡ್ಕರ್ ಅವರ ಆಶಯಗಳನ್ನು ಪ್ರಜ್ಞಾವಂತರು ಮರೆತಿದ್ದಾರೆ. ಶಿಕ್ಷಣ, ಸಂಘಟನೆ ಮತ್ತು ಹೋರಾಟ ಪ್ರಜ್ಞೆಯನ್ನು ವಿದ್ಯಾವಂತರು ಅರಿತುಕೊಳ್ಳಬೇಕು ಎಂದು ಹೇಳಿದರು.  

ಕಾರ್ಯಕ್ರಮದಲ್ಲಿ ಸಿಂಡಿಕೇಟ್ ಸದಸ್ಯ ಎಸ್. ಪಿ. ಸುಳ್ಳದ್, ಮೌಲ್ಯಮಾಪನ ಕುಲಸಚಿವ ಡಾ. ಎನ್. ಜಿ. ಕಣ್ಣೂರು, ವಿತ್ತಾಧಿಕಾರಿ ಜಯಾಂಬಿಕ, ಕುಲಸಚಿವ ಪ್ರೊ. ರಮೇಶ್ ಲಂಡನಕರ್ ಉಪಸ್ಥಿತರಿದ್ದರು. ಕಲಾ ನಿಕಾಯದ ಡೀನ್ ಪ್ರೊ. ಎಚ್. ಟಿ. ಪೋತೆ, ಪ್ರೊ. ಬಸವರಾಜ ಸಣ್ಣಕ್ಕಿ, ಡಾ. ಪ್ರಕಾಶ್ ಕರಿಯಜ್ಜನವರ, ಪ್ರೊ. ಬಿ. ಎಂ. ಬೈನ್, ಪ್ರೊ. ವಿ. ಟಿ. ಕಾಂಬಳೆ ಹಾಗೂ ಸಿಂಡಕೇಟ್ ಸದಸ್ಯರು, ವಿದ್ಯಾವಿಷಯಕ ಪರಿಷತ್ ಸದಸ್ಯರು, ಶಿಕ್ಷಕೇತರ ಸಿಬ್ಬಂದಿ, ಅತಿಥಿ ಉಪನ್ಯಾಸಕರು, ಸಂಶೋಧನಾ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News