Kalaburagi | ಅರ್ಹ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಸೌಲಭ್ಯದಿಂದ ವಂಚಿತರಾಗಬಾರದು : ಡಿಸಿ ಇಕ್ರಮ್ ಶರೀಫ್
ಕಲಬುರಗಿ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆಯ ಸೌಲಭ್ಯ ಜಿಲ್ಲೆಯ ಪ್ರತಿಯೊಬ್ಬ ನೈಜ ಹಾಗೂ ಅರ್ಹ ಫಲಾನುಭವಿಗೆ ತಲುಪಬೇಕು. ತಾಂತ್ರಿಕ ಕಾರಣ, ಆಧಾರ್ ಲಿಂಕ್ ಸಮಸ್ಯೆ ಅಥವಾ ದಾಖಲೆಗಳ ಸಣ್ಣಪುಟ್ಟ ಲೋಪಗಳಿಂದ ಯಾವುದೇ ಅರ್ಹ ಮಹಿಳೆ ಯೋಜನೆಯ ಸೌಲಭ್ಯದಿಂದ ವಂಚಿತರಾಗಬಾರದು ಎಂದು ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಆಯೋಜಿಸಿದ್ದ ಗೃಹಲಕ್ಷ್ಮಿ ಯೋಜನೆಯ ಅರ್ಜಿ ಮರುಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಯೋಜನೆಯ ನಿಯಮಗಳನ್ನು ಉಲ್ಲಂಘಿಸಿ ಸೌಲಭ್ಯ ಪಡೆಯುತ್ತಿರುವ ಅನರ್ಹರನ್ನು ಗುರುತಿಸಿ ತಡೆಯುವ ಜತೆಗೆ, ಅರ್ಹ ಫಲಾನುಭವಿಗಳಿಗೆ ಯಾವುದೇ ತೊಂದರೆಯಾಗದಂತೆ ಪಾರದರ್ಶಕವಾಗಿ ಅರ್ಜಿಗಳ ಮರುಪರಿಶೀಲನೆ ನಡೆಸಬೇಕು. ಅಧಿಕಾರಿಗಳು ಮನೆ ಮನೆಗೆ ತೆರಳಿ ಫಲಾನುಭವಿಗಳ ನೈಜತೆಯನ್ನು ಪರಿಶೀಲಿಸಿ ಜವಾಬ್ದಾರಿಯಿಂದ ಕಾರ್ಯ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಪಂಚಾಯಿತಿ ಅಧಿಕಾರಿಗಳೊಂದಿಗೆ ಗೃಹಲಕ್ಷ್ಮಿ ಯೋಜನೆಯ ಪ್ರಸ್ತುತ ಸ್ಥಿತಿಗತಿ ಕುರಿತು ಜಿಲ್ಲಾಧಿಕಾರಿಗಳು ವಿಸ್ತೃತವಾಗಿ ಚರ್ಚಿಸಿದರು.
ಜಿಲ್ಲೆಯಲ್ಲಿ ಪ್ರಸ್ತುತ ಸುಮಾರು 5.97 ಲಕ್ಷ ಫಲಾನುಭವಿಗಳು ಗೃಹಲಕ್ಷ್ಮಿ ಯೋಜನೆಯಡಿ ನೋಂದಾಯಿಸಿಕೊಂಡಿದ್ದು, ಕಳೆದ 36 ತಿಂಗಳ ಅವಧಿಯಲ್ಲಿ ಪ್ರತಿ ತಿಂಗಳು ಸರಾಸರಿ 120 ಕೋಟಿ ರೂ. ಸೇರಿದಂತೆ ಒಟ್ಟು 4,000 ಕೋಟಿ ರೂ. ಗೂ ಅಧಿಕ ಮೊತ್ತ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಜಮೆಯಾಗಿದೆ ಎಂದು ಸಭೆಯಲ್ಲಿ ಮಾಹಿತಿ ನೀಡಲಾಯಿತು.
ಜಿಲ್ಲೆಯ 3,237 ಅಂಗನವಾಡಿ ಕೇಂದ್ರಗಳ 1,898 ಅಂಗನವಾಡಿ ಕಾರ್ಯಕರ್ತೆಯರು ಯೋಜನೆಯ ಅನುಷ್ಠಾನ ಹಾಗೂ ಮರುಪರಿಶೀಲನಾ ಕಾರ್ಯದಲ್ಲಿ ಭಾಗವಹಿಸಲಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ಒಳಗೊಂಡ ಜಂಟಿ ತಂಡಗಳು ನಗರ ಮತ್ತು ಗ್ರಾಮೀಣ ಪ್ರದೇಶಗಳ ಪ್ರತಿಯೊಂದು ಮನೆಗೆ ತೆರಳಿ ಫಲಾನುಭವಿಗಳ ನೈಜತೆಯನ್ನು ಪರಿಶೀಲಿಸಲಿವೆ.
ಮರಣ ಹೊಂದಿರುವ ಫಲಾನುಭವಿಗಳ ಪ್ರಕರಣಗಳಲ್ಲಿಯೂ ಕುಟುಂಬದ ಪರಿಸ್ಥಿತಿಯನ್ನು ನಿಯಮಾನುಸಾರ ಪರಿಶೀಲಿಸಲಾಗುವುದು. ಕುಟುಂಬಕ್ಕೆ ಬೇರೆ ಯಾವುದೇ ಜೀವನೋಪಾಯದ ಆದಾಯವಿಲ್ಲದಿದ್ದರೆ ಅರ್ಹ ಮಹಿಳೆಯರಿಗೆ ಯೋಜನೆಯ ಸೌಲಭ್ಯ ಮುಂದುವರಿಸುವ ಕುರಿತು ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಸಭೆಯಲ್ಲಿ ನಿರ್ಧರಿಸಲಾಯಿತು.
ಫಲಾನುಭವಿಗಳ ದಾಖಲೆಗಳನ್ನು ಸ್ಥಳದಲ್ಲೇ ಪರಿಶೀಲಿಸಲು ಆಧಾರ್ ಆಧಾರಿತ ಫೇಸ್ ರೆಕಗ್ನಿಷನ್ ಹಾಗೂ ಜಿಪಿಎಸ್ ಮ್ಯಾಪಿಂಗ್ ತಂತ್ರಜ್ಞಾನ ಹೊಂದಿರುವ ಮೊಬೈಲ್ ಆ್ಯಪ್ ಬಳಕೆಗೆ ತರಲಾಗುತ್ತಿದ್ದು, ಈ ಆ್ಯಪ್ ಕೆಲವೇ ದಿನಗಳಲ್ಲಿ ಕಾರ್ಯಾರಂಭಗೊಳ್ಳಲಿದೆ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಎಲ್ಲ ಅಧಿಕಾರಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ, ನಿಗದಿತ ಕಾಲಮಿತಿಯೊಳಗೆ ಅರ್ಜಿಗಳ ಮರುಪರಿಶೀಲನೆ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಆದೇಶಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಎಸ್. ಸಂಕನೂರ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷೆ ಚಂದ್ರಿಕಾ ಪರಮೇಶ್ವರ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.