ಕಾಳಗಿ ತಾಲೂಕು ಪದವೀಧರ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ದೇವೇಂದ್ರ ಓಕಳಿ ಅವಿರೋಧ ಆಯ್ಕೆ
ಕಾಳಗಿ: ತಾಲೂಕಿನ ಕರ್ನಾಟಕ ರಾಜ್ಯ ಪದವೀಧರ ಶಾಲಾ ಶಿಕ್ಷಕರ ಸಂಘದ 2026–31ನೇ ಸಾಲಿನ ಅವಧಿಯ ಅಧ್ಯಕ್ಷರಾಗಿ ದೇವೇಂದ್ರ ಓಕಳಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಮಹೇಶ ಬಡಿಗೇರ ತಿಳಿಸಿದ್ದಾರೆ.
ಈ ಮೊದಲು ಸಂಘದ 12 ನಿರ್ದೇಶಕ ಸ್ಥಾನಗಳಿಗೆ ನಡೆದ ಚುನಾವಣೆಗೆ ಸೆ.22ರಂದು 15 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಬಳಿಕ ಮೂವರು ಅಭ್ಯರ್ಥಿಗಳು ನಾಮಪತ್ರ ಹಿಂಪಡೆದ ಹಿನ್ನೆಲೆಯಲ್ಲಿ 12 ಸ್ಥಾನಗಳಿಗೆ 12 ಅಭ್ಯರ್ಥಿಗಳು ಮಾತ್ರ ಅಂತಿಮ ಕಣದಲ್ಲಿ ಉಳಿದಿದ್ದರು.
ಸೋಮವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ದೇವೇಂದ್ರ ಓಕಳಿ, ನಾಗರಾಜ ಮಡಿವಾಳ, ಪ್ರಕಾಶ ರೊಳೆ, ನಾಗಪ್ಪ ಭೀಮಗೋಳ, ಮಲ್ಲಿಕಾರ್ಜುನ ಅಷ್ಟಗಿ, ಸಿದ್ಧಾರೂಢ, ಸಿದ್ಧರಾಮಪ್ಪ ದಳಪತಿ, ಮಹಿಬೂಬ್ ಸಾಬ್, ಆರತಿ, ಪೂಜಾ ಸಿಂಗೆ, ಜ್ಯೋತಿ ಪವರ್ ಹಾಗೂ ಭೀಮರಾಯ ಅವರು ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾದರು ಎಂದು ಚುನಾವಣಾಧಿಕಾರಿ ಘೋಷಿಸಿದರು.
ಬಳಿಕ ನಡೆದ ಪದಾಧಿಕಾರಿಗಳ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ದೇವೇಂದ್ರ ಓಕಳಿ, ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಪ್ರಕಾಶ ರೊಳೆ ಹಾಗೂ ಖಜಾಂಚಿ ಸ್ಥಾನಕ್ಕೆ ನಾಗಪ್ಪ ಭೀಮಗೋಳ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಮೂವರೂ ಅವಿರೋಧವಾಗಿ ಆಯ್ಕೆಯಾದರು.
ಚುನಾವಣೆಯಲ್ಲಿ ಎಲ್ಲಾ ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ನೂತನ ಪದಾಧಿಕಾರಿಗಳನ್ನು ಸನ್ಮಾನಿಸಿ, ಸಿಹಿ ಹಂಚುವ ಮೂಲಕ ವಿಜಯೋತ್ಸವ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಸಂತೋಷ ಕಲಮೂಡ, ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಅನೀಲಕುಮಾರ ಗುತ್ತೇದಾರ, ಪ್ರಧಾನ ಕಾರ್ಯದರ್ಶಿ ಬಸವಂತರಾಯ ಪೆದ್ದಿ, ಯೂಸೂಫಖಾನ್, ವಿಷ್ಣುಕಾಂತ ಮೈಲಾರಿ, ವಿವೇಕಾನಂದ, ಶಂಕರ ಮಂಗಲಗಿ, ಸಂಜುಕುಮಾರ ಕೋಡ್ಲಿ, ಮಾಣಿಕರಾವ, ಶಂಕರ ಬಿರೆದಾರ, ಮಾರುತಿ ಗಿರಣಿ ಸೇರಿದಂತೆ ಅನೇಕರು ಇದ್ದರು.