ಕಲಬುರಗಿ: ಚಿಟ್ಟೆಗಳು ಪರಿಸರದ ಆರೋಗ್ಯವನ್ನು ಸೂಚಿಸುವ ಪ್ರಮುಖ ಜೀವಿಗಳಾಗಿದ್ದು, ಪರಾಗಸ್ಪರ್ಶ ಸೇರಿದಂತೆ ಪರಿಸರ ವ್ಯವಸ್ಥೆಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಚಿಟ್ಟೆಗಳ ವೈವಿಧ್ಯತೆಯನ್ನು ಸಂರಕ್ಷಿಸುವ ಮೂಲಕ ಸಸ್ಯ ವೈವಿಧ್ಯತೆ ಹಾಗೂ ಒಟ್ಟಾರೆ ಜೀವವೈವಿಧ್ಯ ಸಂರಕ್ಷಣೆಗೆ ಸಹಕಾರಿಯಾಗುತ್ತದೆ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುನಿಲ್ ಕುಮಾರ್ ಚೌಹಾಣ್ ಹೇಳಿದರು.

ಚಿತ್ತಾಪುರ ಅರಣ್ಯ ವಲಯದ ಸಹಯೋಗದಲ್ಲಿ ಶರಣಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯದ ಪ್ರಾಣಿಶಾಸ್ತ್ರ ವಿಭಾಗ ಹಾಗೂ ಇಕೋ ಕ್ಲಬ್ ವತಿಯಿಂದ ಚಿತ್ತಾಪುರ ತಾಲೂಕಿನ ಗುಂಡಗುರ್ತಿ ಗ್ರಾಮದ ಲುಂಬಿನಿ ಟ್ರೀ ಪಾರ್ಕ್‌ನಲ್ಲಿ ಸೆಪ್ಟೆಂಬರ್ 2026ರ ‘ಬಿಗ್ ಬಟರ್‌ಫ್ಲೈ ಮಂತ್’ ಅಂಗವಾಗಿ ಆಯೋಜಿಸಿದ್ದ ಚಿಟ್ಟೆ ವೀಕ್ಷಣೆ ಹಾಗೂ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಚಿಟ್ಟೆಗಳು ಪರಿಸರ ಸಮತೋಲನ ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುವ ಜೀವಿಗಳಾಗಿವೆ. ಅವುಗಳ ಅಸ್ತಿತ್ವವು ಪರಿಸರದ ಆರೋಗ್ಯವನ್ನು ಪ್ರತಿಬಿಂಬಿಸುತ್ತದೆ. ಆದ್ದರಿಂದ ಚಿಟ್ಟೆಗಳ ಸಂರಕ್ಷಣೆಯೊಂದಿಗೆ ಅವುಗಳ ನೈಸರ್ಗಿಕ ಆವಾಸಸ್ಥಾನಗಳ ಸಂರಕ್ಷಣೆಯೂ ಅಗತ್ಯವಾಗಿದೆ ಎಂದು ತಿಳಿಸಿದರು.

ಚಿತ್ತಾಪುರ ವಲಯ ಅರಣ್ಯಾಧಿಕಾರಿ ವಿಜಯಕುಮಾರ್ ಮಾತನಾಡಿ, ನಗರೀಕರಣ, ಆವಾಸಸ್ಥಾನಗಳ ನಾಶ, ಕೀಟನಾಶಕಗಳ ಅತಿಯಾದ ಬಳಕೆ ಹಾಗೂ ಹವಾಮಾನ ಬದಲಾವಣೆಯಿಂದ ಚಿಟ್ಟೆಗಳ ಸಂಖ್ಯೆಯಲ್ಲಿ ಗಣನೀಯ ಇಳಿಮುಖವಾಗುತ್ತಿದೆ. ಹೀಗಾಗಿ ನೈಸರ್ಗಿಕ ಪರಿಸರವನ್ನು ಉಳಿಸುವ ನಿಟ್ಟಿನಲ್ಲಿ ಎಲ್ಲರೂ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.

ಪ್ರಾಣಿಶಾಸ್ತ್ರ ವಿಭಾಗದ ಅಧ್ಯಾಪಕ ಪವನ್ ಮೋಹನ್ ರಾವ್ ವಿದ್ಯಾರ್ಥಿಗಳಿಗೆ ಚಿಟ್ಟೆಗಳನ್ನು ಗುರುತಿಸುವ ವಿಧಾನ, ಅವುಗಳ ನೈಸರ್ಗಿಕ ವರ್ತನೆಗಳನ್ನು ಗಮನಿಸುವುದು ಹಾಗೂ ಛಾಯಾಚಿತ್ರಗಳ ಮೂಲಕ ದಾಖಲಿಸುವ ಕುರಿತು ಪ್ರಾಯೋಗಿಕ ತರಬೇತಿ ನೀಡಿದರು. ಚಿಟ್ಟೆಗಳಿಗೆ ಯಾವುದೇ ರೀತಿಯ ಹಾನಿ ಮಾಡದೆ ಅವುಗಳ ಸಂರಕ್ಷಣೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಜಾಗೃತಿ ಮೂಡಿಸಿದರು.

‘ಚಿಟ್ಟೆಗಳನ್ನು ಸಂರಕ್ಷಿಸಿ–ಜೀವವೈವಿಧ್ಯವನ್ನು ಉಳಿಸಿ’ ಎಂಬ ಸಂದೇಶದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಲುಂಬಿನಿ ಟ್ರೀ ಪಾರ್ಕ್‌ನಂತಹ ನೈಸರ್ಗಿಕ ಪ್ರದೇಶಗಳು ಚಿಟ್ಟೆಗಳು ಸೇರಿದಂತೆ ವಿವಿಧ ಜೀವಿಗಳ ಪ್ರಮುಖ ಆವಾಸಸ್ಥಾನಗಳಾಗಿವೆ. ಇಂತಹ ಪ್ರದೇಶಗಳ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಸಹಭಾಗಿತ್ವ ಅತ್ಯಗತ್ಯ ಎಂದು ತಿಳಿಸಲಾಯಿತು.

ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳು, ಅಧ್ಯಾಪಕರು, ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪ್ರಕೃತಿ ಪ್ರೇಮಿಗಳು ಟ್ರೀ ಪಾರ್ಕ್‌ನಲ್ಲಿ ಚಿಟ್ಟೆ ವೀಕ್ಷಣೆ ಮತ್ತು ದಾಖಲಾತಿ ಕಾರ್ಯದಲ್ಲಿ ಪಾಲ್ಗೊಂಡರು. ವಿವಿಧ ಸಸ್ಯಗಳ ಮೇಲೆ ಕಂಡುಬಂದ ಚಿಟ್ಟೆಗಳ ವೈವಿಧ್ಯತೆ, ಅವುಗಳ ಆವಾಸಸ್ಥಾನ, ಆಹಾರ ಸಸ್ಯಗಳು ಹಾಗೂ ಪರಿಸರ ವ್ಯವಸ್ಥೆಯಲ್ಲಿ ಅವುಗಳ ಮಹತ್ವದ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು.

ಕಾರ್ಯಕ್ರಮದಲ್ಲಿ ವನ್ಯಜೀವಿ ಛಾಯಾಗ್ರಾಹಕ ಅಭಿಷೇಕ್, ಡಿಆರ್‌ಎಫ್‌ಒ ಅನಿಲ್ ಕುಮಾರ್, ಬೀಟ್ ಫಾರೆಸ್ಟರ್ ಶ್ರೀಕಾಂತ್, ಅರಣ್ಯ ಸಿಬ್ಬಂದಿಗಳಾದ ನಾಗೇಶ್, ಸಿದ್ದು, ಜಾಫರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor