ಎಚ್‌ಐವಿ/ಏಡ್ಸ್ ಜಾಗೃತಿಗಾಗಿ ಕಲಬುರಗಿಯಲ್ಲಿ ಬೈಕ್ ಜಾಥಾ
ಕಲಬುರಗಿ: ಎಚ್‌ಐವಿ/ಏಡ್ಸ್ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕ (DAPCU) ವತಿಯಿಂದ ಸೋಮವಾರ ಬೈಕ್ ಜಾಥಾ ಆಯೋಜಿಸಲಾಯಿತು.
ಜಿಲ್ಲಾ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ (GIMS) ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ವಿಭಾಗೀಯ ಸಹ ನಿರ್ದೇಶಕ ಡಾ. ಶಂಕ್ರಪ್ಪ ಮೈಲಾರಿ ಅವರು ಬೈಕ್ ಜಾಥಾಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಉಪನಿರ್ದೇಶಕ ಡಾ. ಶರಣಬಸಪ್ಪ ಗಣಜಲಖೇಡ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶರಣಬಸಪ್ಪ ಕ್ಯಾತನಾಳ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಸಂತೋಷ ಅಲಗೂರು, ಜಿಲ್ಲಾ ಶಸ್ತ್ರಜ್ಞೆ ಡಾ. ಅಸ್ನಾ ಬೇಗ್ ಹಾಗೂ ಜಿಲ್ಲಾ DAPCO ಅಧಿಕಾರಿ ಡಾ. ಮಹಮ್ಮದ್ ಗಫಾರ್ ಉಪಸ್ಥಿತರಿದ್ದರು.
ಬೈಕ್ ಜಾಥಾವು ಅನ್ನಪೂರ್ಣ ಕ್ರಾಸ್ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ, ಬಳಿಕ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿಗೆ ಮರಳುವ ಮೂಲಕ ಮುಕ್ತಾಯವಾಯಿತು. ಜಾಥಾದ ಮೂಲಕ ಎಚ್‌ಐವಿ/ಏಡ್ಸ್ ತಡೆಗಟ್ಟುವಿಕೆ, ಮುನ್ನೆಚ್ಚರಿಕೆ ಹಾಗೂ ಜಾಗೃತಿಯ ಕುರಿತು ಸಾರ್ವಜನಿಕರಿಗೆ ಸಂದೇಶ ನೀಡಲಾಯಿತು.
ಕಾರ್ಯಕ್ರಮದಲ್ಲಿ ಡಾ. ರಿಮಾ, DAPCO ಮೇಲ್ವಿಚಾರಕರಾದ ಬಿರಾದಾರ ಮತ್ತು ಅರ್ಚನಾ, NTEP ಮೇಲ್ವಿಚಾರಕರು, DAPCU ಸಿಬ್ಬಂದಿ, ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ, ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.