Kalaburagi | ಬೆಳೆ ವಿಮೆ ಪರಿಹಾರಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ರೈತರ ಮನವಿ
ಕಲಬುರಗಿ : ಆಳಂದ ತಾಲೂಕಿನ ಮುನ್ನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುನ್ನಹಳ್ಳಿ ಹಾಗೂ ಬಸವನ ಸಂಗೊಳಗಿ ಗ್ರಾಮಗಳ ರೈತರು 2025-26ನೇ ಸಾಲಿನ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬೆಳೆ ಹಾನಿಗೆ ಸಂಬಂಧಿಸಿದ ವಿಮಾ ಪರಿಹಾರ ದೊರೆಯದ ಹಿನ್ನೆಲೆಯಲ್ಲಿ ಬುಧವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಕಳೆದ ವರ್ಷ ಅತಿಯಾದ ಮಳೆಯಿಂದ ತೊಗರಿ ಬೆಳೆ ಸಂಪೂರ್ಣ ಹಾನಿಗೊಳಗಾಗಿದ್ದು, ಯೋಜನೆಯಡಿ ರೈತರು ಬೆಳೆ ವಿಮೆ ಮಾಡಿಸಿಕೊಂಡಿದ್ದರು. ಬೆಳೆ ಹಾನಿ ಕುರಿತು ಕೃಷಿ ಇಲಾಖೆ, ಕಂದಾಯ ಇಲಾಖೆ ಹಾಗೂ ವಿಮಾ ಕಂಪನಿಯ ಅಧಿಕಾರಿಗಳು ಜಂಟಿಯಾಗಿ ಸ್ಥಳ ಪರಿಶೀಲನೆ ನಡೆಸಿದ್ದರೂ, ವರದಿಯನ್ನು ಸರ್ಕಾರಕ್ಕೆ ಸಮರ್ಪಕವಾಗಿ ಸಲ್ಲಿಸದ ಕಾರಣ ವಿಮಾ ಪರಿಹಾರ ಬಿಡುಗಡೆಯಾಗಿಲ್ಲ ಎಂದು ರೈತರು ಆರೋಪಿಸಿದರು.
ಅಧಿಕಾರಿಗಳ ನಿರ್ಲಕ್ಷ್ಯದಿಂದ ಅರ್ಹ ರೈತರು ವಿಮಾ ಪರಿಹಾರದಿಂದ ವಂಚಿತರಾಗಿದ್ದು, ಇದರಿಂದ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದೇವೆ ಎಂದು ಅಳಲು ತೋಡಿಕೊಂಡರು.
ಬೆಳೆ ಹಾನಿಯ ಕುರಿತು ಮತ್ತೊಮ್ಮೆ ಸ್ಥಳ ಪರಿಶೀಲನೆ ನಡೆಸಿ, ಅಗತ್ಯ ವರದಿ ಸಲ್ಲಿಸುವ ಮೂಲಕ ಅರ್ಹ ರೈತರಿಗೆ ಶೀಘ್ರವೇ ವಿಮಾ ಪರಿಹಾರ ಬಿಡುಗಡೆ ಮಾಡಿಸಬೇಕು ಎಂದು ಜಿಲ್ಲಾಧಿಕಾರಿಯನ್ನು ರೈತರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರೈತರಾದ ಶಂಭುಲಿಂಗಯ್ಯ ಹಿರೇಮಠ, ಮಹಾದೇವ ಗುಂಡುರೆ, ಮಾರುತರಾವ ಕುಲಕರ್ಣಿ, ಪ್ರಕಾಶ ಪಾಟೀಲ, ಗುಂಡಪ್ಪ ಜ್ಯಾನೆ, ದಯಾನಂದ ವಾಲೆ, ಬಸವರಾಜ ಶೆಗಜಿ, ಶ್ರೀನಿವಾಸ ಕುಲಕರ್ಣಿ, ಸಂಗಮೇಶ ಮ್ಯಾಳಗೆ, ರಾಜು ರೆಡ್ಡಿ, ಶರಣಪ್ಪ ಕಮಾಜಿ, ಅಣ್ಣಾರಾವ ಬಿರಾದಾರ, ಬಾಬು ಬಿರಾದಾರ, ಸಿದ್ದಣ್ಣ ಜ್ಯಾನೆ, ಮಹಾಂತೇಶ ಅಜಚೇರಿ, ಕುಶ ಬಿರಾದಾರ, ರೇವಣಸಿದ್ದ ಪೂಜಾರಿ ಸೇರಿದಂತೆ ಅನೇಕ ರೈತರು ಉಪಸ್ಥಿತರಿದ್ದರು.