ಕಲಬುರಗಿ | ಗಮನ ಸೆಳೆದ ದಖ್ಹನಿ ಉರ್ದು ನಾಟಕ ʼಕಿವಡೆ ಕಾ ಬನ್ʼ
ಕಲಬುರಗಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರಂಗಾಯಣ ಕಲಬುರಗಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಬಹುಭಾಷಾ ನಾಟಕೋತ್ಸವ ನಿಮಿತ್ತ ಶನಿವಾರ ರಾತ್ರಿ ಇಲ್ಲಿನ ಡಾ.ಎಸ್.ಎಂ ಪಂಡಿತ್ ರಂಗ ಮಂದಿರದಲ್ಲಿ ದಖ್ಹನಿ ಉರ್ದು ಭಾಷೆಯ ʼಕಿವಡೆ ಕಾ ಬನ್ʼ ಎಂಬ ನಾಟಕ ಪ್ರೇಕ್ಷಕರ ಗಮನ ಸೆಳೆಯಿತು.
ಖ್ಯಾತ ದಖ್ಹನಿ ಉರ್ದು ಸಾಹಿತಿ ಸುಲೇಮಾನ್ ಖತೀಬ್ ರಚನೆಯ ʼಕೆವಡೆ ಕಾ ಬನ್ʼ ನಾಟಕವನ್ನು ಅಲಿ ಅಹ್ಮದ್ ನಿರ್ದೇಶನ ಮಾಡಿದ್ದರು.
ನಾಟಕದ ಉದ್ಘಾಟನೆ ವೇಳೆ ಮಾತನಾಡಿದ ರಾಯಚೂರಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಂಗಕರ್ಮಿ ಜಫರ್ ಮುಹಿಯುದ್ದೀನ್, ಸುಲೇಮಾನ್ ಖತೀಬ್ ಅವರು ಹಲವು ವರ್ಷಗಳ ಹಿಂದೆ ಮೃತಪಟ್ಟಿದ್ದರೂ ಕೂಡ ಅವರ ಕೊಟ್ಟ ಕೊಡುಗೆ ಅನನ್ಯವಾಗಿದೆ, ದಖ್ಹನಿ ಭಾಷೆಯನ್ನು ದೇಶಾದ್ಯಂತ ಪ್ರಸಿದ್ಧಿಗೊಳಿಸಿದವರಲ್ಲಿ ಹಿಂದಿ ನಟ ಮೆಹಮೂದ್ ಮೊದಲಾದರೆ ಅವರೊಂದಿಗೆ ಸಾಹಿತಿ ಸುಲೇಮಾನ್ ಖತೀಬ್ ಅವರು ಕಾಣುತ್ತಾರೆ ಎಂದರು.
ರಂಗಾಯಣ ನಿರ್ದೇಶಕಿ ಸುಜಾತಾ ಜಂಗಮಶೆಟ್ಟಿ ಮಾತನಾಡಿ, ಕಲ್ಯಾಣ ಕರ್ನಾಟಕ ಬಹು ಸಂಸ್ಕೃತಿಯ ನಾಡು, ಕನ್ನಡದಿಂದ ಉರ್ದು, ಮರಾಠಿ, ತೆಲುಗು ಮಾತನಾಡುತ್ತಾರೆ, ಭಾಷೆ, ಸಂಗೀತ, ಸಾಹಿತ್ಯಕ್ಕೆ ಧರ್ಮ, ಜಾತಿ ಇರುವುದಿಲ್ಲ, ಇದು ಎಲ್ಲೆಯೂ ಮೀರುತ್ತದೆ ಎಂದು ಹೇಳಿದರು.
ಭಾರತೀಯ ಉರ್ದು ಮಂಚನ ಅಧ್ಯಕ್ಷ ಸೈಯದ್ ರವುಫ್ ಖಾದ್ರಿ ಮಾತನಾಡಿ, 36 ವರ್ಷಗಳಿಂದ ಸುಲೇಮಾನ್ ಖತೀಬ್ ಸ್ಮಾರಕ ಶೈಕ್ಷಣಿಕ ಸಾಂಸ್ಕೃತಿಕ ಹಾಗೂ ಚಾರಿಟೇಬಲ್ ಸಂಸ್ಥೆಯು ಸಾಂಸ್ಕೃತಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಾ ಕಲ್ಯಾಣ ಕರ್ನಾಟಕದ ದಖ್ಹನಿ ಭಾಷೆಯನ್ನು ಪ್ರಚರಿಸುತ್ತಾ ಬರುತ್ತಿರುವುದು ಹೆಮ್ಮೆಯ ವಿಷಯ ಎಂದರು.
ಕೆಕೆಆರ್ ಡಿಬಿ ಉಪಕಾರ್ಯದರ್ಶಿ ಪ್ರವೀಣ್ ಪ್ರಿಯಾ, ಮಹಾತ್ಮಾ ಗಾಂಧೀಜಿ ಗ್ರಾಹಕರ ರಕ್ಷಣಾ ವೇದಿಕೆಯ ಪ್ರಧಾನ ಕಾರ್ಯದರ್ಶಿ ವೈಜನಾಥ್ ಝಳಕಿ, ಅಖಿಲ ಭಾರತೀಯ ಉರ್ದು ಮಂಚನ ಅಧ್ಯಕ್ಷ ಸೈಯದ್ ರವೂಫ್ ಖಾದ್ರಿ, ರೋಜಾ ಕುರ್ದ್ ನ ಉತ್ತರಾಧಿಕಾರಿ ಸಯ್ಯದ್ ಶಾ ಯಾದುಲ್ಲಾ ಹುಸೈನಿ, ಸೇರಿದಂತೆ ಹಲವರು ಇದ್ದರು.
ಸುಲೇಮಾನ್ ಖತೀಬ್ ಸ್ಮಾರಕ ಶೈಕ್ಷಣಿಕ ಸಾಂಸ್ಕೃತಿಕ ಹಾಗೂ ಚಾರಿಟೇಬಲ್ ಸಂಸ್ಥೆಯ ಶಮೀಮ್ ಸುರೈಯ ಪ್ರಾಸ್ತಾವಿಕ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು.
ಸಾಧಕರಿಗೆ ವಿಶೇಷ ಸನ್ಮಾನ :
2025ನೇ ಸಾಲಿನಲ್ಲಿ ಎಸ್ಎಸ್ಎಲ್ಸಿ ವಿಭಾಗದಲ್ಲಿ 625ಕ್ಕೆ 621 ಅಂಕ ಪಡೆದು ರಾಜ್ಯಕ್ಕೆ ಕೀರ್ತಿ ತಂದಿರುವ ನಿಮಿತ್ತ ವಿದ್ಯಾರ್ಥಿನಿ ನಝರಿನ್ ಗೌಸ್ ಮೈನುದ್ದೀನ್ ಅವರಿಗೆ 5 ಗ್ರಾಮ ಬಂಗಾರ, 10 ಸಾವಿರ ನಗದು ಹಣ ಸೇರಿದಂತೆ ಪ್ರಶಸ್ತಿ ಫಲಕ ನೀಡಿ ಗೌರವಿಸಲಾಯಿತು. ಅಲ್ಲದೆ, ಎಸೆಸೆಲ್ಸಿಯಲ್ಲಿ 625ಕ್ಕೆ 616 ಅಂಕ ಪಡೆದ ಜುಬೇಯಾ ರುಬೀನ, ಹಾವೇರಿಯ ಶಗುಪ್ತಾ ಹಾಗೂ ಶಿಕ್ಷಕಿ ಅಸ್ಮಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.