Kalaburagi | ಇಂಡಿಯಾ ಬೈತುಲ್ ಮಾಲ್ ಟ್ರಸ್ಟ್‌ನಿಂದ 20 ಯುವಕರಿಗೆ ಉಚಿತ ಕೌಶಲ ತರಬೇತಿ
ಕಲಬುರಗಿ, ಆ.8: ಯುವಕರನ್ನು ಸ್ವಾವಲಂಬಿಗಳನ್ನಾಗಿ ರೂಪಿಸುವ ಉದ್ದೇಶದಿಂದ ಇಂಡಿಯಾ ಬೈತುಲ್ ಮಾಲ್ ಟ್ರಸ್ಟ್ ಹಮ್ಮಿಕೊಂಡಿದ್ದ 2026ನೇ ಸಾಲಿನ ಉಚಿತ ಕೌಶಲ ಅಭಿವೃದ್ಧಿ ತರಬೇತಿ ಕಾರ್ಯಕ್ರಮದ ಮತ್ತೊಂದು ತಂಡ ಯಶಸ್ವಿಯಾಗಿ ತರಬೇತಿ ಪೂರ್ಣಗೊಳಿಸಿದೆ.
ಈ ಬಾರಿ ಟ್ರಸ್ಟ್ ವತಿಯಿಂದ 10 ವಿದ್ಯಾರ್ಥಿಗಳಿಗೆ ಉಚಿತ ಮೊಬೈಲ್ ರಿಪೇರಿ ತರಬೇತಿ ಹಾಗೂ 10 ವಿದ್ಯಾರ್ಥಿಗಳಿಗೆ ನಾಲ್ಕು ಚಕ್ರ ವಾಹನ ಚಾಲನಾ ತರಬೇತಿ ನೀಡಲಾಗಿದೆ. ಚಾಲನಾ ತರಬೇತಿ ಪಡೆದ ಎಲ್ಲ 10 ವಿದ್ಯಾರ್ಥಿಗಳು ಚಾಲನಾ ಪರವಾನಗಿ (ಡ್ರೈವಿಂಗ್ ಲೈಸೆನ್ಸ್) ಪಡೆದಿದ್ದಾರೆ.
ಟ್ರಸ್ಟ್ ಉಪಾಧ್ಯಕ್ಷ ಎಂ.ಡಿ. ಇಕ್ಬಾಲ್ ಅಲಿ ಮಾತನಾಡಿ, ಕಳೆದ ಹಲವು ವರ್ಷಗಳಿಂದ 10ನೇ ತರಗತಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತ ಕೌಶಲ ತರಬೇತಿ ನೀಡಲಾಗುತ್ತಿದೆ. ಯುವಕರಲ್ಲಿ ಉದ್ಯೋಗ ಕೌಶಲ ಬೆಳೆಸುವುದು, ಸ್ವಾವಲಂಬನೆಗೆ ಪ್ರೇರೇಪಿಸುವುದು ಹಾಗೂ ಸ್ವಂತ ಉದ್ಯೋಗಕ್ಕೆ ಅವಕಾಶ ಕಲ್ಪಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.
ತರಬೇತಿ ಪಡೆದ ಯುವಕರು ತಮ್ಮ ಕೌಶಲವನ್ನು ಸಮರ್ಪಕವಾಗಿ ಬಳಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳುವುದರೊಂದಿಗೆ ಕುಟುಂಬ ಹಾಗೂ ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದು ಅವರು ಆಶಯ ವ್ಯಕ್ತಪಡಿಸಿದರು.
ಈ ಕಾರ್ಯಕ್ಕೆ ಸಹಕರಿಸಿದ ದಾನಿಗಳು, ಬೆಂಬಲಿಗರು, ತರಬೇತುದಾರರು ಹಾಗೂ ಹಿತೈಷಿಗಳಿಗೆ ಇಂಡಿಯಾ ಬೈತುಲ್ ಮಾಲ್ ಟ್ರಸ್ಟ್ ಕೃತಜ್ಞತೆ ಸಲ್ಲಿಸಿದೆ.