Kalaburagi | ಆಳಂದ ತಾಲೂಕಿನ ವಿವಿಧೆಡೆ ಶೌಚಾಲಯ ಅವ್ಯವಸ್ಥೆ; ಜೆಡಿಎಸ್ ಮಹಿಳಾ ಘಟಕದಿಂದ ಪಾದಯಾತ್ರೆ

Update: 2026-08-07 20:53 IST

ಕಲಬುರಗಿ, ಆ.8: ಆಳಂದ ತಾಲೂಕಿನ ಮಾಡಿಯಾಳ ಸೇರಿದಂತೆ ವಿವಿಧ ಗ್ರಾಮಗಳ ಸಾರ್ವಜನಿಕ ಶೌಚಾಲಯಗಳ ದಯನೀಯ ಸ್ಥಿತಿಯನ್ನು ಖಂಡಿಸಿ ಹಾಗೂ ಶಾಶ್ವತ ಸ್ವಚ್ಛತಾ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಜೆಡಿಎಸ್ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ಮಹೇಶ್ವರಿ ಎಸ್. ವಾಲಿ ಅವರ ನೇತೃತ್ವದಲ್ಲಿ ಆಳಂದದಿಂದ ಕಲಬುರಗಿ ಜಿಲ್ಲಾ ಪಂಚಾಯಿತಿ ಕಚೇರಿವರೆಗೆ ಶಾಂತಿಯುತ ಪಾದಯಾತ್ರೆ ನಡೆಸಲಾಯಿತು.

ಪಾದಯಾತ್ರೆಯ ಬಳಿಕ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಸಲ್ಲಿಸಿದ ಮಹೇಶ್ವರಿ ಎಸ್. ವಾಲಿ, ಮಾಡಿಯಾಳ ಗ್ರಾಮದಲ್ಲಿ ಸುಮಾರು 12 ಸಾವಿರ ಜನಸಂಖ್ಯೆ ಇದ್ದರೂ ಸಮರ್ಪಕ ಸಾರ್ವಜನಿಕ ಶೌಚಾಲಯಗಳ ಕೊರತೆಯಿಂದ ಮಹಿಳೆಯರು, ಮಕ್ಕಳು ಹಾಗೂ ವೃದ್ಧರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ತಿಳಿಸಿದರು.

ಗ್ರಾಮದಲ್ಲಿರುವ ನಾಲ್ಕು ಸಾರ್ವಜನಿಕ ಶೌಚಾಲಯಗಳ ಪೈಕಿ ಎರಡು ಸಂಪೂರ್ಣ ಶಿಥಿಲಗೊಂಡಿದ್ದು, ಮತ್ತೊಂದು ಶೌಚಾಲಯವು ಮೇಲ್ಛಾವಣಿ, ನೀರು, ವಿದ್ಯುತ್ ಹಾಗೂ ಸ್ವಚ್ಛತಾ ಸೌಲಭ್ಯಗಳ ಕೊರತೆಯಿಂದ ಬಳಕೆಗೆ ಅಯೋಗ್ಯವಾಗಿದೆ. ಇನ್ನೊಂದು ಶೌಚಾಲಯದ ಕಾಮಗಾರಿ ಎರಡು ತಿಂಗಳ ಹಿಂದೆಯೇ ಪೂರ್ಣಗೊಂಡಿದ್ದರೂ ಸಾರ್ವಜನಿಕರ ಬಳಕೆಗೆ ತೆರೆಯಲಾಗಿಲ್ಲ ಎಂದು ಆರೋಪಿಸಿದರು.

ಮಹಿಳೆಯರ ಘನತೆ ಹಾಗೂ ಸುರಕ್ಷತೆಗೆ ಸುರಕ್ಷಿತ ಶೌಚಾಲಯ ವ್ಯವಸ್ಥೆ ಅತ್ಯಗತ್ಯವಾಗಿದೆ. ಮಾಡಿಯಾಳ ಗ್ರಾಮದಲ್ಲಿ ಸ್ವಚ್ಛ ಹಾಗೂ ಶಾಶ್ವತ ಶೌಚಾಲಯ ಸೌಲಭ್ಯ ಕಲ್ಪಿಸುವವರೆಗೆ ಹೋರಾಟ ಮುಂದುವರಿಸಲಾಗುವುದು ಎಂದು ಅವರು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಬಾಲರಾಜ ಗುತ್ತೇದಾರ್, ಆಳಂದ ತಾಲೂಕು ಅಧ್ಯಕ್ಷ ರಫಿಕ್ ಇನಾಮ್ದಾರ್, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸೈಯದ್ ಜಾಕೀರ್ ಅಹ್ಮದ್, ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಬಸವರಾಜ ಬಿರಬಿಟ್ಟಿ, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ರಾಜಕುಮಾರ ಬಡದಾಳ, ಯುವ ಘಟಕದ ಅಧ್ಯಕ್ಷ ಪ್ರವೀಣ ಜಾಧವ, ಹಿರಿಯ ಉಪಾಧ್ಯಕ್ಷ ಮಹಾತಂಪ್ಪ ಮದರಿ, ವೆಂಕಟೇಶ ರಾಠೋಡ್, ಸೈಫಾನ್ ಪಟೇಲ್, ಮಶಾಕ್ ಡಾಂಗೆ, ಅರ್ಬಾಜ್ ಶೇಖ್, ಆಮೀರ್ ಅನ್ಸಾರಿ ಸೇರಿದಂತೆ ಜೆಡಿಎಸ್ ಮುಖಂಡರು, ಮಹಿಳಾ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News