Kalaburagi | ಶಾಖಾಪುರ ಪ್ರಕರಣ: 17 ಆರೋಪಿಗಳ ಬಂಧನಕ್ಕೆ ಸಂತೋಷ ಪೂಜಾರಿ ಆಗ್ರಹ

Update: 2026-08-07 20:51 IST

ಕಲಬುರಗಿ : ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಶಾಖಾಪುರ ಘಟನೆಗೆ ಸಂಬಂಧಿಸಿದಂತೆ ಪರಾರಿಯಾಗಿರುವ 17 ಆರೋಪಿಗಳನ್ನು ತಕ್ಷಣ ಬಂಧಿಸಿ, ಪ್ರಕರಣದ ತನಿಖೆಯನ್ನು ಹಿರಿಯ ಐಪಿಎಸ್ ಅಧಿಕಾರಿಯ ನೇತೃತ್ವದ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ವಹಿಸಬೇಕು ಎಂದು ಗೊಂಡ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಸಂತೋಷ ಎಸ್. ಪೂಜಾರಿ ಒತ್ತಾಯಿಸಿದರು.

ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೂರುದಾರರು ಹಾಗೂ ಸಾಕ್ಷಿಗಳಿಗೆ ಸೂಕ್ತ ಪೊಲೀಸ್ ರಕ್ಷಣೆ ಒದಗಿಸಬೇಕು. ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾಗಿರುವ ಕುಟುಂಬಗಳಿಗೆ ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ತಾಲೂಕು ಆಡಳಿತ ತಕ್ಷಣ ಮರುಸ್ಥಾಪಿಸಬೇಕು ಎಂದು ಆಗ್ರಹಿಸಿದರು.

ಪ್ರಕರಣದಲ್ಲಿ ಸ್ಥಳೀಯ ಪೊಲೀಸರು ಏಕಪಕ್ಷೀಯವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ ಅವರು, ಪರಾರಿಯಾಗಿರುವ ಆರೋಪಿಗಳ ವಿರುದ್ಧ ರೌಡಿಶೀಟ್ ತೆರೆಯುವಂತೆ ಒತ್ತಾಯಿಸಿದರು.

ಬೇಡಿಕೆಗಳನ್ನು ತಕ್ಷಣ ಈಡೇರಿಸದಿದ್ದರೆ ಯಾದಗಿರಿ ಹಾಗೂ ಕಲಬುರಗಿ ಜಿಲ್ಲಾಧಿಕಾರಿ ಕಚೇರಿಗಳಿಗೆ ಮುತ್ತಿಗೆ ಹಾಕುವುದು, ಸುರಪುರ ಬಂದ್ ನಡೆಸುವುದು ಹಾಗೂ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಭೀಮಣ್ಣ ಕರೆ, ಪೀರಪ್ಪ ಪೂಜಾರಿ, ಸಚಿನ್ ಎಸ್., ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News