×
Ad

ಕಲಬುರಗಿ | ಕನ್ನಡಿಗರ ಸಮಸ್ಯೆಗಳಿಗೆ ಸರಕಾರ ಸ್ಪಂದಿಸಲಿ : ದತ್ತಾತ್ರೇಯ ಪಾಟೀಲ ರೇವೂರ

Update: 2025-05-05 19:12 IST

ಕಲಬುರಗಿ : ನಾಡಿನ ನೆಲ-ಜಲ ಹಾಗೂ ಭಾಷೆ, ಸಂಸ್ಕೃತಿಗೆ ಧಕ್ಕೆ ಬಂದಾಗ ಎಲ್ಲಾ ಕನ್ನಡಿಗರು ಒಂದಾಗಬೇಕು ಎಂದು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಮಾಜಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಹೇಳಿದರು.

ನಗರದ ಕನ್ನಡ ಭವನದಲ್ಲಿ ಸೋಮವಾರ ಜರುಗಿದ ಕನ್ನಡ ಸಾಹಿತ್ಯ ಪರಿಷತ್ತಿನ 111 ನೇ ಸಂಸ್ಥಾಪನಾ ದಿನಾಚರಣೆ ಹಾಗೂ ವಿಶೇಷ-ವೈವಿಧ್ಯಮಯ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕನ್ನಡಿಗರ ಅಸ್ಮಿತೆಗೆ ಕಿಂಚಿತ್ತು ಧಕ್ಕೆಯಾಗಬಾರದು. ಮಾತೃಭಾಷೆಯೇ ನಮಗೆಲ್ಲ ಸ್ಪೂರ್ತಿದಾಯಕ ಮತ್ತು ಹೃದಯ ಶ್ರೀಮಂತಿಕೆ ಹೆಚ್ಚಿಸುತ್ತದೆ. ಇತ್ತೀಚೆಗೆ ಕಾಶ್ಮೀರ ಭಯೋತ್ಪಾದಕರ ದಾಳಿಯಿಂದ ಕನ್ನಡಿಗರಿಬ್ಬರ ಜೀವ ಕಳೆದುಕೊಂಡಿದ್ದಾರೆ. ಅಂಥ ಸಂದಿಗ್ಧ ಸನ್ನಿವೇಶದಲ್ಲಿ ಕನ್ನಡಿಗರ ಹೃದಯವಂತಿಕೆ, ಭಾಷಾಭಿಮಾನ ಹಾಗೂ ಪರಸ್ಪರ ಸಹಕಾರ ಮನೋಭಾವ ಹೆಚ್ಚಿಸುತ್ತದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲೆಯಲ್ಲಿ ನಿರಂತರವಾಗಿ ಕನ್ನಡಿಗರ ಸೇವಾ ಕಾರ್ಯಗಳಿಗೆ ಬದ್ಧರಾಗಿ ಸೇವಾ ಮಾಡಿ, ನಾಡಿಗೆ ಮಾದರಿಯಾಗಿ ಕನ್ನಡ ಕಟ್ಟುವ ಕಾಯಕ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಕನ್ನಡ ಕಳಕಳಿಯುಳ್ಳವರು ಯಾವುದೇ ತರಗತಿ ಇರಲಿ, ಮಕ್ಕಳನ್ನು ಜಾತಿ-ಧರ್ಮಗಳ ಗೋಡೆಯಿಂದ ನೋಡಬಾರದು. ತಂದೆ-ತಾಯಿ, ವಿದ್ಯಾ ಗುರುಗಳ ಮೇಲೆ ನಂಬಿಕೆಯನ್ನಿಟ್ಟು ಯಶಸ್ವಿ ಕಾರ್ಯ ಕೈಗೊಳ್ಳಬೇಕು. ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮುಖ್ಯವಾಗಿದೆ. ಭಯ ಇಲ್ಲದೆಯೇ ಗುರಿಯತ್ತ ಹೆಜ್ಜೆ ಹಾಕಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ ಅವರು, ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಹೆಮ್ಮೆಯ ಸಂಕೇತವಾಗಿದೆ. ನಮ್ಮ ನಾಡು-ನುಡಿ, ನೆಲ-ಜಲ, ಸಂಸ್ಕೃತಿ ಸಾಹಿತ್ಯವನ್ನು ರಕ್ಷಿಸಿ ಬೆಳೆಸುವಲ್ಲಿ ಸಾಹಿತ್ಯ ಪರಿಷತ್ ಪ್ರಮುಖ ಪಾತ್ರ ವಹಿಸಿದೆ ಎಂದು ತಿಳಿಸಿದರು.

ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಅರುಣಕುಮಾರ ಪಾಟೀಲ ಮಾತನಾಡಿ, ನೆಲ-ಜಲದ ಪ್ರಶ್ನೆ ಎದುರಾದಾಗ ಯಾರು ಕೂಡ ಪ್ರಶ್ನೆ ಮಾಡದೇ ಒಂದಾಗಿ ಹಕ್ಕಿನ ಸಲುವಾಗಿ ಹೋರಾಟ ಮಾಡಬೇಕಿದೆ. ಜಿಲ್ಲೆಯಲ್ಲಿ ಸಾಂಸ್ಕೃತಿಕ ವಾತಾವರಣ ಮೂಡಿಸುವುದರ ಜತೆಗೆ ಹೊಸ ಮುಖಗಳಿಗೆ ಪರಿಷತ್ತು ಆದ್ಯತೆ ಕೊಡುತ್ತಿರುವುದು ಅವರಲ್ಲಿನ ಪ್ರತಿಭಾ ಅನಾವರಣಕ್ಕೆ ಅವಕಾಶ ಮಾಡಿಕೊಡುತ್ತಿದೆ ಎಂದರು.

ಹಿರಿಯ ಸಾಹಿತಿ ಡಾ. ನಾಗಾಬಾಯಿ ಬುಳ್ಳಾ, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸುರೇಶ ಅಕ್ಕಣ್ಣಾ, ಗುರೂಜಿ ಪದವಿ ಮಹಾವಿದ್ಯಾಲಯದ ಅಧ್ಯಕ್ಷ ಕಲ್ಯಾಣಕುಮಾರ ಶೀಲವಂತ, ಜಿಲ್ಲಾ ಕಸಾಪ ದ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಧರ್ಮಣ್ಣ ಎಚ್ ಧನ್ನಿ, ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ, ಸಿದ್ಧಲಿಂಗ ಬಾಳಿ, ರಾಜೇಂದ್ರ ಮಾಡಬೂಳ, ರವೀಂದ್ರಕುಮಾರ ಭಂಟನಳ್ಳಿ, ಶಕುಂತಲಾ ಪಾಟೀಲ ಜಾವಳಿ, ಜ್ಯೋತಿ ಕೋಟನೂರ ಮಾತನಾಡಿದರು.

ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷರಾದ ಡಾ.ನಾಗಾಬಾಯಿ ಬುಳ್ಳಾ, ಸಿದ್ಧರಾಮ ಪೊಲೀಸ್ ಪಾಟೀಲ, ಡಾ.ಕಲ್ಯಾಣರಾವ ಜಿ.ಪಾಟೀಲ ಅವರನ್ನು ಪರಿಷತ್ತಿನ ವತಿಯಿಂದ ವಿಶೇಷವಾಗಿ ಸತ್ಕರಿಸಲಾಯಿತು.

ಕಸಾಪದ ಹಿರಿಯ ಸದಸ್ಯರಾದ ರಾಚಪ್ಪ ಮುಗುಳಿ, ರೇವಪ್ಪ ಬೊಮ್ಮನ, ಸೈಯ್ಯದ್ ನಜಿರುದ್ದೀನ್ ಮುತ್ತವಲಿ, ಸುರೇಶ ಭರಣಿ, ಸೋಮಶೇಖರ ನಂದಿಧ್ವಜ, ಶಿವಾನಂದ ಮಠಪತಿ, ಕೆ.ಬಸವರಾಜ, ವಿಶ್ವ ಕಾಮರೆಡ್ಡಿ, ಮೈಲಾರಿ ಪೂಜಾರಿ ಅವರನ್ನೂ ಸಹ ಸತ್ಕರಿಸಲಾಯಿತು.

ಪ್ರಸಕ್ತ ಸಾಲಿನ ಪಿಯುಸಿ ದ್ವಿತೀಯ ವರ್ಷದ ಪರೀಕ್ಷೆಯ ಕನ್ನಡದಲ್ಲಿ ಅತೀ ಹೆಚ್ಚು ಅಂಕಗಳು ಪಡೆದ ಜಿಲ್ಲೆಯ ವಿದ್ಯಾರ್ಥಿಗಳಿಗೆ ಇಲ್ಲಿನ ಗುರೂಜಿ ಪದವಿ ಕಾಲೇಜಿನ ಸಹಕಾರದೊಂದಿಗೆ ಪರಿಷತ್ತು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News