×
Ad

Kalaburagi | ಸಾಧಕರನ್ನು ಗೌರವಿಸುವುದು ಸಮಾಜದ ಜವಾಬ್ದಾರಿ: ವಿಜಯಕುಮಾರ ತೇಗಲತಿಪ್ಪಿ

ಸವಿತಾ ಸಮಾಜ ಸರ್ಕಾರಿ–ಅರೆ ಸರ್ಕಾರಿ ನೌಕರರ ಸಂಘದ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಸಮಾರಂಭ

Update: 2026-07-12 19:53 IST

ಕಲಬುರಗಿ: ಶಿಕ್ಷಣ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪ್ರತಿಭೆಗಳನ್ನು ಗುರುತಿಸಿ ಗೌರವಿಸುವುದು ಸಮಾಜದ ಜವಾಬ್ದಾರಿಯಾಗಿದ್ದು, ಯುವಕರು ಶಿಕ್ಷಣದ ಜೊತೆಗೆ ಸಾಮಾಜಿಕ ಜವಾಬ್ದಾರಿಯನ್ನೂ ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಹೇಳಿದರು.

ನಗರದ ಹಳೆಯ ಜೇವರ್ಗಿ ರಸ್ತೆಯ ಶ್ರೀ ವೆಂಕಟಗಿರಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಸವಿತಾ ಸಮಾಜ ಸರ್ಕಾರಿ/ಅರೆ ಸರ್ಕಾರಿ ನೌಕರರ ಸಂಘದ ವತಿಯಿಂದ ಆಯೋಜಿಸಿದ್ದ 11ನೇ ವರ್ಷದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾರಂಭದಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ಹಾಗೂ ಪಿಎಚ್‌.ಡಿ. ಪರೀಕ್ಷೆಗಳಲ್ಲಿ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳು, ನೂತನ ಸರ್ಕಾರಿ ಸೇವೆಗೆ ಸೇರ್ಪಡೆಯಾದವರು, ನಿವೃತ್ತ ಸರ್ಕಾರಿ ನೌಕರರು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಯಿತು.

ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಮಾತನಾಡಿ, ಶಿಕ್ಷಣವು ಸಮಾಜದ ಪ್ರಗತಿಗೆ ಅತ್ಯಂತ ಪರಿಣಾಮಕಾರಿ ಸಾಧನವಾಗಿದೆ. ಪ್ರತಿಭಾವಂತರನ್ನು ಗುರುತಿಸಿ ಗೌರವಿಸುವ ಮೂಲಕ ಮುಂದಿನ ಪೀಳಿಗೆಗೆ ಪ್ರೇರಣೆ ನೀಡುತ್ತಿರುವ ಸಂಘದ ಕಾರ್ಯ ಶ್ಲಾಘನೀಯ ಎಂದು ಹೇಳಿದರು.

ವಿಶೇಷ ಉಪನ್ಯಾಸ ನೀಡಿದ ನ್ಯಾಯವಾದಿ ಡಾ. ಜಗನ್ನಾಥ ತರನಳ್ಳಿ (ಸೇಡಂ), ಶಿಕ್ಷಣವೇ ಸಮಾಜದ ಅಭಿವೃದ್ಧಿಯ ಮೂಲಾಧಾರವಾಗಿದ್ದು, ಪ್ರತಿಭಾವಂತ ಯುವಜನರು ತಮ್ಮ ಜ್ಞಾನ ಮತ್ತು ಸಾಮರ್ಥ್ಯವನ್ನು ಸಮಾಜದ ಏಳಿಗೆಗೆ ಸಮರ್ಪಿಸಬೇಕು ಎಂದು ಕರೆ ನೀಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಜಿಲ್ಲಾ ಅಧ್ಯಕ್ಷ ದೇವೇಂದ್ರಪ್ಪ ಕುರಿಹಾಳ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಂಕರ ಎಸ್. ಕಾಳನೂರ, ಆನಂದ ವಾರಿಕ, ಗಂಗಾಧರ ಹೆಚ್. ಸುರಪುರ, ಡಾ. ನಾಗಪ್ಪ ಟಿ. ಗೋಗಿ, ರಾಜಶೇಖರ ಮಾನೆ, ಮಲ್ಲಣ್ಣ ಆರ್. ಗೋಗಿ, ರಾಜೇಂದ್ರ ಬಿ. ಅಷ್ಟಗೀಕರ, ಗಣೇಶ ಪಿ. ಚಿನ್ನಾಕಾರ, ಮಹೇಶ ಉಜ್ಜೆಲೀಕರ್, ಡಾ. ದತ್ತಾತ್ರೇಯ ಸಿ. ಸೂರ್ಯವಂಶಿ, ಜ್ಯೋತಿ ಆಡಕಿ ಹಾಗೂ ಶಶಿಕುಮಾರ ಮದ್ದೂರು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ಸುಗಮ ಸಂಗೀತ ಕಾರ್ಯಕ್ರಮದಲ್ಲಿ ಪ್ರಕಾಶ್ ತಂಡದ ಗಾಯನ ವಿಶೇಷ ಆಕರ್ಷಣೆಯಾಗಿತ್ತು.

ಕಾರ್ಯಕ್ರಮದಲ್ಲಿ ಪೂರ್ಣಿಮಾ ಆರ್. ಸೂರ್ಯವಂತಿ ಪ್ರಾರ್ಥನಾ ಗೀತೆ ಹಾಡಿದರು. ಡಾ. ಶೇಷರಾವ ಚಿಕಲಿಕರ್ ಸ್ವಾಗತಿಸಿದರು. ದೇವಿದಾಸ ಕೆ. ಜಹೀರಾಬಾದಕರ್ ಪ್ರಸ್ತಾವನೆ ಮಂಡಿಸಿದರು. ಶ್ರೀನಿವಾಸ ನಾಲವಾರ ಕಾರ್ಯಕ್ರಮ ನಿರೂಪಿಸಿ, ಗಿರಿಜಾಶಂಕರ ಕೆ. ಗೋಗಿ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News