Kalaburagi | ಸಂಗೀತ ದೈಹಿಕ–ಮಾನಸಿಕ ಆರೋಗ್ಯಕ್ಕೆ ದಿವ್ಯ ಔಷಧ: ಡಾ. ಶಿವರಂಜನ ಸತ್ಯಂಪೇಟೆ
ವಚನ ಗಾಯನ ಕಾರ್ಯಕ್ರಮ
ಕಲಬುರಗಿ: ಸಂಗೀತ ಕೇವಲ ಮನರಂಜನೆಯ ಮಾಧ್ಯಮವಲ್ಲ, ಅದು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ದಿವ್ಯ ಔಷಧವಾಗಿದೆ ಎಂದು ಪತ್ರಕರ್ತ–ಲೇಖಕ ಡಾ. ಶಿವರಂಜನ ಸತ್ಯಂಪೇಟೆ ಹೇಳಿದರು.
ನಗರದ ಮರಾಠ ಮಹಾ ಮಂಡಳದಲ್ಲಿ ಪಂಡಿತ ಡಿ.ವಿ. ಪಲುಸ್ಕರ ಸಂಗೀತ ಸಾಹಿತ್ಯ ಕಲಾ ಸಂಘ ಹಾಗೂ ದೇವಿಂದ್ರಪ್ಪ ಜಿ.ಸಿ. ಸಂಗೀತ ಸಾಹಿತ್ಯ ಕಲಾ ಸಂಸ್ಥೆಯ ವತಿಯಿಂದ ಭಾನುವಾರ ಆಯೋಜಿಸಿದ್ದ ವಚನ ಗಾಯನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಚನ ಗಾಯನ ಕಾರ್ಯಕ್ರಮಗಳು ಕನ್ನಡ ಸಾಹಿತ್ಯ, ಸಂಸ್ಕೃತಿ ಹಾಗೂ ಅಧ್ಯಾತ್ಮದ ಮೌಲ್ಯಗಳನ್ನು ಬಿಂಬಿಸುವ ಉತ್ತಮ ವೇದಿಕೆಗಳಾಗಿವೆ. ಸಂಗೀತವು ಮಾನಸಿಕ ಒತ್ತಡವನ್ನು ಕಡಿಮೆಗೊಳಿಸಿ, ಮನುಷ್ಯನ ಕಾರ್ಯಕ್ಷಮತೆ ಮತ್ತು ಏಕಾಗ್ರತೆಯನ್ನು ಹೆಚ್ಚಿಸುವ ಶಕ್ತಿ ಹೊಂದಿದೆ ಎಂದು ಹೇಳಿದರು.
ವಚನಗಳ ಮಧುರ ರಾಗಗಳು ಮತ್ತು ಅರ್ಥಪೂರ್ಣ ಸಂದೇಶಗಳು ಮನಸ್ಸಿಗೆ ನೆಮ್ಮದಿ ನೀಡುವುದರ ಜೊತೆಗೆ ಮಾನವೀಯ ಮೌಲ್ಯಗಳನ್ನು ಬೆಳೆಸುತ್ತವೆ. ವಚನ, ದಾಸ ಮತ್ತು ತತ್ವಪದ ಸಾಹಿತ್ಯವನ್ನು ಜನಮನಕ್ಕೆ ತಲುಪಿಸುವ ಕಾರ್ಯ ಇನ್ನಷ್ಟು ವ್ಯಾಪಕವಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ನಿವೃತ್ತ ಪ್ರಾಧ್ಯಾಪಕ ಪ್ರೊ. ಎಸ್.ಎಲ್. ಪಾಟೀಲ ಭಾಗವಹಿಸಿ ಮಾತನಾಡಿದರು.
ವೇದಿಕೆಯಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಂಗೀತ ವಿಭಾಗದ ಅತಿಥಿ ಉಪನ್ಯಾಸಕ ಡಾ. ತಿಮ್ಮಣ್ಣ ಭಜಂತ್ರಿ, ದೇವಿಂದ್ರಪ್ಪ ಜಿ.ಸಿ. ಸಂಗೀತ ಸಾಹಿತ್ಯ ಕಲಾ ಸಂಸ್ಥೆಯ ಅಧ್ಯಕ್ಷ ಸಿದ್ಧಾರ್ಥ ಚಿಮ್ಮಾಇದಲಾಯಿ ಹಾಗೂ ಪಂಡಿತ ಡಿ.ವಿ. ಪಲುಸ್ಕರ ಸಂಗೀತ ಸಾಹಿತ್ಯ ಕಲಾ ಸಂಘದ ಅಧ್ಯಕ್ಷ ಡಾ. ನಾಗರಾಜ ಪುರಂಕರ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶ್ರೀಧರ ಹೊಸಮನಿ ನಿರೂಪಿಸಿದರು.
ಸಿದ್ಧರಾಮ ಹೊನ್ಕಲ್, ಸಂತೋಷಕುಮಾರ ಕಾಮಶೆಟ್ಟಿ, ದೇವರಾಜ ತೀರ್ಥಪ್ಪ, ಡಾ.ಕ.ಎಸ್. ಬಂಧು, ಪಾಲಕರು ಹಾಗೂ ಸ್ಪರ್ಧಾರ್ಥಿಗಳು ಭಾಗವಹಿಸಿದ್ದರು.