ಸೇಡಂ | ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಚುರುಕುಗೊಳಿಸಿ: ಶರಣಯ್ಯ ಸ್ವಾಮಿ
ಸೇಡಂ: ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಕಾರ್ಯವನ್ನು ಚುರುಕುಗೊಳಿಸಿ, ಪ್ರತಿದಿನ ನಿಗದಿತ ಗುರಿ ಸಾಧಿಸುವ ಮೂಲಕ ಶೇ.100ರಷ್ಟು ಪ್ರಗತಿ ದಾಖಲಿಸಬೇಕು ಎಂದು ನಗರಸಭೆ ಪೌರಾಯುಕ್ತ ಶರಣಯ್ಯ ಸ್ವಾಮಿ ಬೂತ್ ಮಟ್ಟದ ಅಧಿಕಾರಿಗಳಿಗೆ (ಬಿಎಲ್‌ಒ) ಸೂಚನೆ ನೀಡಿದರು.
ನಗರದ ವಿದ್ಯಾನಗರ ಬಡಾವಣೆ, ವೇಂಕಟೇಶನಗರ, ಕೆಇಬಿ ಕಾಲೋನಿ, ಇಂದ್ರನಗರ, ಬಸವನಗರ ಹಾಗೂ ಸಾಯಿಬಾಬಾ ಕಾಲೋನಿ ಸೇರಿದಂತೆ ವಿವಿಧ ಬಡಾವಣೆಗಳಿಗೆ ಭೇಟಿ ನೀಡಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದ ಪ್ರಗತಿಯನ್ನು ಪರಿಶೀಲಿಸಿದ ಅವರು, ಅರ್ಜಿ ನಮೂನೆಗಳ ವಿತರಣೆ, ಭರ್ತಿ ಮಾಡಿದ ಅರ್ಜಿಗಳ ಸಂಗ್ರಹ, ಪರಿಶೀಲನೆ ಹಾಗೂ ಮರುಪಡೆಯುವಿಕೆ ಕುರಿತು ಬಿಎಲ್‌ಒಗಳಿಂದ ಮಾಹಿತಿ ಪಡೆದರು.
ಬಳಿಕ ಮಾತನಾಡಿದ ಅವರು, ಪ್ರತಿಯೊಬ್ಬ ಬಿಎಲ್‌ಒ ತಮ್ಮ ವ್ಯಾಪ್ತಿಯ ಎಲ್ಲ ಅರ್ಹ ಮತದಾರರಿಗೆ ಅರ್ಜಿ ನಮೂನೆಗಳನ್ನು ಕಡ್ಡಾಯವಾಗಿ ವಿತರಿಸಿ, ಭರ್ತಿ ಮಾಡಿಸಿ ನಿಗದಿತ ಅವಧಿಯೊಳಗೆ ಶೇ.100ರಷ್ಟು ಕಾರ್ಯ ಪೂರ್ಣಗೊಳಿಸಬೇಕು. ಯಾವುದೇ ರೀತಿಯ ನಿರ್ಲಕ್ಷ್ಯ ಅಥವಾ ವಿಳಂಬಕ್ಕೆ ಅವಕಾಶ ನೀಡಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯವು ಚುನಾವಣಾ ಪ್ರಕ್ರಿಯೆಯ ಅತ್ಯಂತ ಮಹತ್ವದ ಹಂತವಾಗಿದ್ದು, ಪ್ರತಿಯೊಬ್ಬ ಅರ್ಹ ಮತದಾರರ ಮಾಹಿತಿಯೂ ನಿಖರವಾಗಿ ದಾಖಲಾಗುವಂತೆ ಅಧಿಕಾರಿಗಳು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಪೌರಾಯುಕ್ತ ಶರಣಯ್ಯ ಸ್ವಾಮಿ ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಕಚೇರಿ ವ್ಯವಸ್ಥಾಪಕ ಗುಂಡಪ್ಪ ಹೇಡಳಿಕರ್, ಸಿಎಲ್ಒ ರಾಜೇಶ್ವರಿ, ಮಲ್ಲಿಕಾರ್ಜುನ, ಎಫ್‌ಡಿಎ ಬಸವರಾಜ ಎನ್., ಶಂಕರ ಹಾಗೂ ಸಿಎಲ್ಎ ಏಜೆಂಟ್ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.