×
Ad

ಕಲಬುರಗಿ | ವಕ್ಫ್ ತಿದ್ದುಪಡಿ ಕಾಯ್ದೆ ಹಿಂಪಡೆಯುವಂತೆ ಆಗ್ರಹಿಸಿ ಬೃಹತ್ ಪ್ರತಿಭಟನಾ ಸಮಾವೇಶ

Update: 2025-05-04 23:03 IST

ಕಲಬುರಗಿ : ಸಂವಿಧಾನದ ಮೂಲ ಆಶಯಗಳಿಗೆ ವಿರುದ್ಧವಾಗಿರುವ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿ ಅಖಿಲ ಭಾರತೀಯ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿಯ ನೇತೃತ್ವದಲ್ಲಿ ಕಲಬುರಗಿ ಕುಲ್ ಜಮಾಅತ್‌ ಇತ್ತೆಹಾದ್ ಮಿಲ್ಲತ್ ಸೇರಿದಂತೆ ವಿವಿಧ ಪ್ರಗತಿಪರ, ಸಂವಿಧಾನಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಕಲಬುರಗಿಯಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ರವಿವಾರ ಸಂಜೆ ನಡೆಯಿತು.

ನಗರದ ಪೀರ್ ಬಂಗಾಲಿ ಮೈದಾನದಲ್ಲಿ ಆಯೋಜಿಸಿದ್ದ ಸಮಾವೇಶ ಪ್ರಾರಂಭವಾಗುವುದಕ್ಕಿಂತ ಮೊದಲು ರಾಷ್ಟ್ರಗೀತೆ ಹಾಡಲಾಯಿತು. ಇದೇ ವೇಳೆ ಜಮ್ಮು ಕಾಶ್ಮೀರದಲ್ಲಿ ಉಗ್ರರ ದಾಳಿಯಲ್ಲಿ ಮೃತಪಟ್ಟವರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆ ಮಾಡಲಾಯಿತು.

ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಅಧ್ಯಕ್ಷರಾದ ಹಾಗೂ ಸಜ್ಜಾದ ನಶೀನ ದರ್ಗಾದ ಹಝ್ರತ್ ಖ್ವಾಜಾ ಬಂದೇನವಾಝ್ ಹಾಫಿಝ್ ಸೈಯದ್ ಮುಹಮ್ಮದ್ ಅಲಿ ಅಲ್ ಹುಸೈನಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಆಲ್ ಇಂಡಿಯಾ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ ಅಧ್ಯಕ್ಷ ಹಝ್ರತ್ ಮೌಲಾನಾ ಖಾಲಿದ್ ಸೈಫುಲ್ಲಾ ರಹ್ಮಾನಿ ಮಾತನಾಡಿದರು.

ಜಮಾಅತೆ ಎ ಉಲೆಮಾ ಎ ಹಿಂದ್ ಅಧ್ಯಕ್ಷ ಮೌಲಾನಾ ಮುಹಮ್ಮದ್ ಅಸದ್ ಮದನಿ ಮಾತನಾಡಿ, ವಕ್ಫ್ ಕಾಯ್ದೆಯ ವಿರುದ್ಧ ಜೀವ ಕೊಡಲೂ ಸಿದ್ಧರಾಗಬೇಕಿದೆ, ಆದರೆ ಸರಕಾರದಿಂದ ಕೊಡುತ್ತಿರುವ ದೌರ್ಜನ್ಯವನ್ನು ಸಹಿಸಿಕೊಂಡು ಇರಲಾರೆವು ಎಂದರು.

ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಮಾತನಾಡಿ, ನಾವು, ನಮ್ಮ ಪಕ್ಷ ನಿಮ್ಮ ಜೊತೆಗಿದೆ, ವಕ್ಫ್ ತಿದ್ದುಪಡಿ ಕಾಯ್ದೆ ವಾಪಸ್ ಪಡೆಯುವರೆಗೂ ನಾವು ಬಿಡುವುದಿಲ್ಲ, ಈ ಹಿಂದೆ ಎನ್ ಆರ್ ಸಿ, ಸಿಎಎ ಕಾಯ್ದೆ ಜಾರಿ ಮಾಡಿ ಅಬ್ ಕೀ ಬಾರ್ 400 ಪಾರ್ ಎಂದವರು, ಚಾರ್ ಸೌ ಪಾರ್ ಆಗಲಿಲ್ಲ ಎಂದು ಹೇಳಿದರು.

ಸಚಿವ ರಹೀಂ ಖಾನ್ ಮಾತನಾಡಿ, ಕೇಂದ್ರದ ಬಿಜೆಪಿ ಸರಕಾರದ 12 ವರ್ಷಗಳ ವೈಫಲ್ಯಗಳನ್ನು ಜನರು ಪ್ರಶ್ನಿಸುತ್ತಾರೆ ಎಂಬ ಆತಂಕ ಸರಕಾರಕ್ಕೆ ಇದೆ. ಜನರ ದಿಕ್ಕುತಪ್ಪಿಸಲು ವಕ್ಫ್ ತಿದ್ದುಪಡಿ ಕಾಯ್ದೆ ತಂದಿದ್ದಾರೆ ಎಂದು ಹೇಳಿದರು.

ಉತ್ತರ ಮತಕ್ಷೇತ್ರದ ಶಾಸಕಿ ಕನೀಜ್ ಫಾತೀಮಾ ಮಾತನಾಡಿ, ಸಂವಿಧಾನ ವಿರೋಧಿ ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ನಿರಂತರ ಹೋರಾಟ ಮಾಡೋಣ, ಕೇಂದ್ರ ಸರ್ಕಾರ ಕಾಯ್ದೆ ಹಿಂಪಡೆಯುವವರೆಗೂ ಇಟ್ಟ ಹೆಜ್ಜೆ ಹಿಂದೆ ಇಡುವುದಿಲ್ಲ ಎಂದು ಶಪಥ ಮಾಡಿದರು.

ಮಾಜಿ ರಾಜ್ಯಸಭಾ ಸಂಸದೆ ಬೃಂದಾ ಕಾರಟ್ ಮಾತನಾಡಿ, ವಕ್ಫ್ ಕಾನೂನು ಕೇವಲ ಮುಸ್ಲಿಮರ ವಿರೋಧಿ ಅಷ್ಟೇ ಅಲ್ಲ, ಸಂವಿಧಾನದ ವಿರೋಧಿಯಾಗಿದೆ, ಇದರ ವಿರುದ್ಧ ಹೊರಾಡಲು ಕಮ್ಯುನಿಷ್ಟ್ ಪಕ್ಷದ ನಾಯಕ ಸಲೀಂ ಅವರು ಸುಪ್ರಿಂಕೋರ್ಟ್ ನಲ್ಲಿ ದಾವೆ ಹೂಡಿದ್ದಾರೆ. ನಾವು ರಸ್ತೆ, ವಿಧಾನಸಭೆ, ಲೋಕಸಭೆ, ರಾಜ್ಯಸಭೆಯಲ್ಲೂ ವಕ್ಫ್ ವಿರುದ್ಧ ಚಳುವಳಿ ನಡೆಸಿ, ನಿಮ್ಮ ಜೊತೆ ಇರುತ್ತೇವೆ ಎಂದು ಭರವಸೆ ನೀಡಿದರು.

ಮುಂಬೈ ಪ್ರದೇಶವೊಂದರಲ್ಲಿ ಮುಸ್ಲಿಂ ಸಮುದಾಯದ ವಕ್ಫ್ ಭೂಮಿಯನ್ನು ಸ್ವಾಧೀನಪಡಿಸಿಕೊಂಡ ಮೋದಿ ಸರಕಾರ ಇಂದು ಅಂಬಾನಿ ಅದಾನಿಯವರಿಗೆ ಕೊಟ್ಟಿದೆ ಎಂದು ಆರೋಪಿಸಿದರು.

ಕಮ್ಯುನಿಷ್ಟ್ ಪಕ್ಷದ ನಾಯಕ ಡಿ.ರಾಜಾ ಮಾತನಾಡಿ, ಅಂಬೇಡ್ಕರ್ ಅವರು ಸಂವಿಧಾನದ ಪ್ರಸ್ತಾವನೆಯಲ್ಲಿ ‘ಭಾರತೀಯರಾದ ನಾವು’ ಎಂದು ಉಲ್ಲೇಖಿಸಿದ್ದಾರೆ. ಆದರೆ ಅದರಲ್ಲಿ ನಾವು ಹಿಂದೂ, ನಾವು ಮುಸ್ಲಿಮ್, ನಾವು ಕ್ರಿಶ್ಚಿಯನ್ ಎಂದು ಉಲ್ಲೇಖಿಸಿಲ್ಲ, ಆದರೆ ಮೋದಿ ಸರಕಾರ ಇಂದು ಇಸ್ಲಾಮ್ ಧರ್ಮವನ್ನು ಟಾರ್ಗೆಟ್ ಮಾಡುತ್ತಿದೆ, ದೇಶದಲ್ಲಿ ಬೆಲೆ ಏರಿಕೆ, ನಿರುದ್ಯೋಗ ಹೆಚ್ಚಾಗುತ್ತಿದೆ, ಇದರ ಬಗ್ಗೆ ಎಂದೂ ತಲೆ ಕೆಡಿಸಿಕೊಳ್ಳಲಿಲ್ಲ ಎಂದು ಹರಿಹಾಯ್ದ ಅವರು, ‘ದೇಶ ಬಚಾವೋ ಬಿಜೆಪಿ ಹಠಾವೋ’ ಆಗಬೇಕಿದೆ ಎಂದರು.

ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮಾತನಾಡಿ, ದೇಶದಲ್ಲಿ ಒತ್ತಾಯ ಪೂರ್ವಕವಾಗಿ ವಕ್ಫ್ ಕಾಯ್ದೆ ಜಾರಿಗೆ ತರಲಾಗುತ್ತಿದೆ, ಯಾವುದೇ ಕಾನೂನು ಜಾರಿಗೆ ತರಬೇಕಾದರೆ ಆಯಾ ವಿಷಯಗಳಿಗೆ ಸಂಬಂಧಿಸಿದ ತಜ್ಞರ ಜೊತೆ ಚರ್ಚಿಸಿ ಜಾರಿಗೊಳಿಸಬೇಕು, ಇಲ್ಲಿ ಯಾವ ಮುಸ್ಲಿಮ್ ನಾಯಕ, ಮುಖಂಡ ಕೂಡ ಈ ಕಾಯ್ದೆ ಜಾರಿಗೆ ತನ್ನಿ ಎಂದು ಒತ್ತಾಯಿಸಿಲ್ಲ. ಇದು ಆರ್ಟಿಕಲ್ 14ರ ಉಲ್ಲಂಘನೆಯಾಗಿದೆ ಎಂದು ಹೇಳಿದರು.

ಅಣದೂರಿನ ವರಜ್ಯೋತಿ ಭಂತೇಜಿ ಮಾತನಾಡಿ, ಇಂದು ಮುಸ್ಲಿಮ್ ಸಮುದಾಯದ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ. ನಾಳೆ ಬೌದ್ಧ ಧರ್ಮದ ವಿರುದ್ಧವೂ ನಡೆಯುತ್ತದೆ, ಬಾಬರಿ ಮಸೀದಿ ಪ್ರಕರಣ ತೀರ್ಪು ಹೊರ ಬಂದ ಬಳಿಕ ದೊಡ್ಡ ದಂಗೆಯೇ ಏಳುತ್ತಿತ್ತು. ತೀರ್ಪನ್ನು ಸಮಾಧಾನವಾಗಿ ಸ್ವೀಕರಿಸಿದ ಮುಸ್ಲಿಮರಿಗೆ ದೊಡ್ಡ ಸೆಲ್ಯೂಟ್ ಎಂದರು.

ಈ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯ ಸಯ್ಯದ್ ನಾಸೀರ್ ಹುಸೈನ್, ಶಾಸಕ ಅಲ್ಲಮಪ್ರಭು ಪಾಟೀಲ್, ಜಗದೇವ ಗುತ್ತೇದಾರ್, ಎಂಎಲ್ಸಿ ತಿಪ್ಪಣ್ಣಪ್ಪ ಕಮಕನೂರ್, ಮಾಜಿ ಸಚಿವ ಸಿಎಂ ಇಬ್ರಾಹಿಂ, ಡಾ.ಸೈಯದ್ ಮುಸ್ತಾಫಾ ಹುಸೈನಿ, ಗುರುಮಿತ್ ಸಿಂಗ್, ಡಾ.ಅಜಗರ್ ಚುಲಬುಲ್, ಮೀನಾಕ್ಷಿ ಬಾಳಿ, ಕೆ.ನೀಲಾ, ಮಹೇಶ್ ಕುಮಾರ್ ರಾಥೋಡ್, ಫಾದರ್ ಅರುಣ್ ವಾಸ್, ಝಾಕೀರ್ ಹುಸೈನ್, ಹಜರತ್ ಖಾಝಾ ಗಂಜ್ ಬಕ್ಷಶ್ ದರ್ಗಾದ ಸಜ್ಜಾದಾ ನಶೀನ್ ಸೈಯದ್ ಶಾ ಹಸನ್ ಶಬ್ಬಿರ್ ಹುಸೈನಿ ಅಖೀಲ್ ಸಾಹಬ್, ಫಾದರ್ ಲೋಬೊ, ಶೈಕ್ ಅಫಜಲೊದ್ದೀನ್ ಜುನೈದಿ ಸಾಹಬ್, ಹಜರತ್ ತೆಗೆಬ್ರಹಾನ್ ದರ್ಗಾದ ಸಜ್ಜಾದ ನಶೀನ್ ಸೈಯದ್ ಶಾ ಹಿಸಾಮೊದ್ದೀನ್ ಹುಸೈನಿ ಹಾಸ್ಮಿ ಪೇರ್ ಸಾಹಬ್, ಶುಷ್ಕಾ ಥೈ ಆನಧಾರೆ, ಮೌಲಾನಾ ಮುಫ್ರಿ ಸೈಯದ್ ಜಿಯಾವೊದ್ದೀನ್ ನಕಶಬಂದಿ, ಗುರಬೀತ್ ಸಿಂಗ್ ಮಿಂಟೋ, ಮೌಲಾ ಮುಲ್ಲಾ, ಅಖಿಲ ಭಾರತೀಯ ಮುಸ್ಲಿಂ ವಯಕ್ತಿಕ ಕಾನೂನು ಮಂಡಳಿಯ ಸದಸ್ಯರಾದ ಮೌಲಾನಾ ತೌಖೀರ್ ರಜಾ, ಹಜರತ್ ಮೌಲಾನಾ ಮುಫ್ರಿ ಖಲೀಲ್ ಅಹ್ಮದ್, ಗುರುಮಂಥ ಸ್ವಾಮಿಜಿ ಇಳಕಲ್, ಫರಾಜ್ ಉಲ್ ಇಸ್ಲಾಂ, ಅಬ್ದುಲ್ ರಹೀಂ ಮಿರ್ಚಿ, ಮಿರಾಜುದ್ದೀನ್ ಪಟೇಲ್ , ಶ್ಯಾಮ್ ನಾಟೀಕರ್, ಸೇರಿದರೆ ಹಲವು ವಿವಿಧ ಧಾರ್ಮಿಕ ಮುಖಂಡರು ಉಪಸ್ಥಿತರಿದ್ದರು.

 

 

 

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News