×
Ad

ಕಲಬುರಗಿ | ಹೆಣ್ಣು ಮನಸ್ಸು ಮಾಡಿದರೆ ರಾಷ್ಟ್ರವನ್ನೂ ನಡೆಸಬಲ್ಲಳು : ಜಗದೀಶ್ವರಿ ಯರಗೋಳ

Update: 2025-12-16 11:19 IST

ಕಲಬುರಗಿ(ಚಿತ್ತಾಪುರ): ತಾಳ್ಮೆ, ಕ್ಷಮೆ, ದೃಢತೆ ಹಾಗೂ ಧೈರ್ಯಶಾಲಿಯಾದ ಹೆಣ್ಣುವೊಬ್ಬಳು ಮನಸ್ಸು ಮಾಡಿದರೆ, ಇಡೀ ರಾಷ್ಟ್ರವನ್ನೂ ನಡೆಸಬಲ್ಲಳು ಎಂದು ನರ್ಮದಾ ಗಿಲಡಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಜಗದೀಶ್ವರಿ ಯರಗೋಳ ವಿಶ್ವಾಸ ವ್ಯಕ್ತಪಡಿಸಿದರು.

ಚಿತ್ತಾಪುರ ಪಟ್ಟಣದ ಶ್ರೀ ವೀರಭದ್ರೇಶ್ವರ ಶಿಕ್ಷಣ ಸಂಸ್ಥೆಯ ಅಡಿಯ ಪ್ರಾರ್ಥನಾ ಪೂರ್ವ ಪ್ರಾಥಮಿಕ ಮತ್ತು ವೀರಭದ್ರೇಶ್ವರ ಪ್ರಾಥಮಿಕ ಮತ್ತು ವಸತಿ ಪ್ರೌಢಶಾಲೆಯ ಆವರಣದಲ್ಲಿ ಮಾತೆಯರಿಗಾಗಿ ಆಯೋಜಿಸಿದ ಸಪ್ತಶಕ್ತಿ ಸಂಗಮ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪಾಶ್ಚಿಮಾತ್ಯ ಸಂಸ್ಕೃತಿ ಪ್ರಭಾವದಿಂದ ಭಾರತೀಯ ಸಂಪ್ರದಾಯವನ್ನು ಪ್ರಸ್ತುತ ಮಹಿಳೆಯರು ಮರೆಯುತ್ತಿದ್ದಾರೆ ಎಂದು ಕಳವಳದಿಂದ ನುಡಿದ ಅವರು, ಹೀಗಾಗಿ ತಾಯಿ ಗಟ್ಟಿಯಾಗ ಬೇಕಾಗಿದೆ. ತಾಯಿಯಿಂದಲೇ ಮಕ್ಕಳಿಗೆ ಮೊದಲ ಶಿಕ್ಷಣ. ತಾಯಿ ಶಿಕ್ಷಣವೇ ಮಕ್ಕಳಿಗೆ ಭದ್ರ ಬುನಾದಿ ಎಂದರು.

ನರ್ಮದಾ ಗಿಲ್'ಡಾ ಕನ್ಯಾ ಪ್ರೌಢ ಶಾಲೆಯ ಪ್ರಧಾನ ಗುರುಗಳಾದ ಅನಂತಮ್ಮ ರೆಡ್ಡಿ ಮಾತನಾಡಿ, ಪ್ರಸ್ತುತ ಸಮಾಜದಲ್ಲಿ ಅವಿಭಕ್ತ ಕುಟುಂಬಗಳು ಒಡೆದು ವಿಭಕ್ತ ಕುಟುಂಬಗಳಾಗುತ್ತಿದೆ. ಮೊಬೈಲ್ ಮತ್ತು ಸಾಮಾಜಿಕ ಜಾಲತಾಣದಿಂದ ಮಕ್ಕಳನ್ನು ದೂರವಾಗಿಡಬೇಕು. ನಮ್ಮ ಸಂಸ್ಕೃತಿ, ಹಬ್ಬ, ಆಚಾರ-ವಿಚಾರಗಳ ಬಗ್ಗೆ ಮಕ್ಕಳಿಗೆ ತಿಳಿಸಬೇಕು. ಪ್ರತಿಯೊಂದು ಹಬ್ಬದ ಹಿನ್ನೆಲೆಯನ್ನು ಅರ್ಥ ಮಾಡಿಸಬೇಕು ಎಂದು ಪಾಲಕರಿಗೆ ಸಲಹೆ ನೀಡಿದರು.

ಸಂಗೀತ ವೀರಣ್ಣಾ ಸುಲ್ತಾನಪುರ ಜ್ಯೋತಿ ಬೆಳಗಿಸುವುದರೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶಿಕ್ಷಕಿ ಭಾರತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯ ಮೇಲೆ ಶಾಲೆಯ ಶಿಕ್ಷಕಿಯರಾದ ರೋಜ್ ಮೇರಿ, ಶರಣಕುಮಾರಿ ಇದ್ದರು.

ಸಾಧಕರ ವೇಷದಲ್ಲಿ ಗಮನ ಸೆಳೆದ ಮಕ್ಕಳು :

ಮಹಿಳೆಯರಿಗಾಗಿ ಆಯೋಜಿಸಲಾದ ಸಪ್ತಶಕ್ತಿ ಸಂಗಮ ಕಾರ್ಯಕ್ರಮದಲ್ಲಿ ನವರಾತ್ರಿಯ 9 ದುರ್ಗಿಯ ಅವತಾರ, ಕಲ್ಪನಾ ರಾವ್, ಸಾವಿತ್ರಿ ಬಾ ಫುಲೇ, ಸಾಲುಮರದ ತಿಮ್ಮಕ್ಕ, ಭಾರತ ಮಾತೆ, ಓನಕೆ ಓಬವ್ವ, ಕಿತ್ತೂರು ರಾಣಿ ಚೆನ್ನಮ್ಮ, ಮದರ್ ತೆರೆಸಾ, ಮೀರಾಬಾಯಿ, ಶರಣೆ ಅಕ್ಕಮಹಾದೇವಿ, ಶಕುಂತಲಾ, ಕಿರಣ್ ಬೇಡಿ, ಸೀತಾ ಮಾತಾ, ಜೀಜಾ ಬಾಯಿ, ಇಂದಿರಾ ಗಾಂಧಿ, ಝಾನ್ಸಿರಾಣಿ ಲಕ್ಷ್ಮೀಬಾಯಿ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಿಳಾ ಸಾಧಕರ ವೇಷದಲ್ಲಿ ಚಿಕ್ಕ ಮಕ್ಕಳು ಕಾರ್ಯಕ್ರಮದ ಗಮನ ಸೆಳೆದರು.

ವಿದ್ಯಾರ್ಥಿನಿ ಪೌರ್ಣಮಿ ಮತ್ತು ವೈಷ್ಣವಿಯ ಭರತನಾಟ್ಯ ಆಕರ್ಷಣೆಯಾಗಿತ್ತು. ಶಿಕ್ಷಕಿಯರಾದ ಶಮಿಮ್, ನಿರ್ಮಲಾ ರಾಠೋಡ, ಅಮೀನಾ ಬೇಗಂ, ಪೂಜಾ ಚವ್ಹಾಣ, ಸಲ್ಮಾ, ನಾಗಮ್ಮ, ಪೂಜಾ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಮಾತೇಯರು ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು.

ವಿದ್ಯಾರ್ಥಿನಿ ಭಾಗ್ಯಲಕ್ಷ್ಮಿ ನಿರೂಪಿಸಿದರು. ಆರ್.ಸುಮನಾ ಸ್ವಾಗತಿಸಿದರು. ಅದಿತಿ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News