×
Ad

ಕಲಬುರಗಿ | ಎ.16 ರಂದು ಉದ್ಯೋಗ ಮೇಳ : ಪೂರ್ವಸಿದ್ದತಾ ಕಾರ್ಯ‌ ವೀಕ್ಷಿಸಿದ ಜಿಲ್ಲಾಧಿಕಾರಿ

Update: 2025-04-14 16:45 IST

ಕಲಬುರಗಿ : ಕಲಬುರಗಿ ನಗರದ ಕೆ.ಸಿ.ಟಿ. ಕಾಲೇಜಿನಲ್ಲಿ ಎ.16 ರಂದು ಕಲಬುರಗಿ ವಿಭಾಗ ಮಟ್ಟದ ಉದ್ಯೋಗ ಮೇಳ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಅವರು ಕೆ.ಸಿ.ಟಿ ಕಾಲೇಜಿಗೆ ಭೇಟಿ ನೀಡಿ‌ ಅಂತಿಮ ಸಿದ್ಧತಾ ಕಾರ್ಯ ವೀಕ್ಷಿಸಿದರು.

ವೇದಿಕೆ, ಮಧ್ಯಾಹ್ನದ ಊಟ, ಪಾರ್ಕಿಂಗ್, ಸಂದರ್ಶನ ಕೊಠಡಿ, ಗಣ್ಯರ ತಂಗುವಿಕೆಯ ಗ್ರೀನ್ ರೂಂ ಸೇರಿದಂತೆ ಇಡೀ ಕ್ಯಾಂಪಸ್ ಸುತ್ತಾಡಿ ಸ್ಥಳ ಪರಿಶೀಲಿಸಿದರು.

ಅಭ್ಯರ್ಥಿಗಳ ನೋಂದಣಿಗೆ 40 ಕೌಂಟರ್ ಸ್ಥಾಪಿಸಬೇಕು. ಬಿಸಿಲು ಹೆಚ್ಚಿರುವ ಕಾರಣ‌ ನೆರಳಿನ ವ್ಯವಸ್ಥೆ ಮಾಡಬೇಕು. ವಾಹನ ಪಾರ್ಕಿಂಗ್ ವ್ಯವಸ್ಥೆ, ನೊಂದಣಿ, ಸಂದರ್ಶನ ಸ್ಥಳಗಳ ಕುರಿತು ಅಲ್ಲಲ್ಲಿ ಸೈನೇಜ್ ಬೋರ್ಡ್ ಅಳವಡಿಸಬೇಕೆಂದು ಇವೆಂಟ್ ಮ್ಯಾನೇಜರ್ ಗಳಿಗೆ ಸೂಚಿಸಿದರು.

ವಿಶೇಷವಾಗಿ ಅಭ್ಯರ್ಥಿಗಳಿಗೆ ಕುಡಿಯುವ ನೀರು, ಬೆಳಗಿನ ಉಪಹಾರ, ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಬೇಕು. ಊಟಕ್ಕೆ 30 ಕೌಂಟರ್ ಸ್ಥಾಪಿಸಬೇಕು. ಉದ್ಯೋಗದಾತರು ಸಂದರ್ಶನ ನಡೆಸಲು ಅನುಕೂಲವಾಗುವಂತೆ ಕಾಲೇಜಿನ ಕೊಠಡಿ ಕಾಯ್ದಿರಿಸಿ ಎಲ್ಲಾ ರೀತಿಯ ಮೂಲಸೌಕರ್ಯ ಕಲ್ಪಿಸಬೇಕು‌ ಎಂದರು.

ಕಾರ್ಯಕ್ರಮ ಸುಲಲಿತವಾಗಿ ನಡೆಯುವ ದೃಷ್ಠಿಯಿಂದ ಎನ್.ಸಿ.ಸಿ., ಎನ್.ಎಸ್.ಎಸ್. ಹಾಗೂ ಐ.ಟಿ.ಐ ವಿದ್ಯಾರ್ಥಿಗಳನ್ನು ಸ್ವಯಂ ಸೇವಕರನ್ನಾಗಿ ನೇಮಿಸಿ ಅವರಿಗೆ ತರಬೇತಿ ನೀಡಿ ಕಾರ್ಯಕ್ರಮ ದಿನದಂದು ಆಯಾ ಕಟ್ಟಿನ ಸ್ಥಳದಲ್ಲಿ ನಿಯೋಜಿಸಬೇಕೆಂದರು.

ಕರ್ನಾಟಕ ಕೌಶಲ್ಯ ಅಭಿವೃದ್ದಿ ನಿಗಮದ ಪವನ್ ಮತ್ತು ಇವೆಂಟ್ ಮ್ಯಾನೇಜರ್ ಪ್ರತಿನಿಧಿ ಗೌಡ ಮತ್ತು ವೈಷ್ಣವಿ ಅವರು ಇದುವರೆಗೆ ಕೈಗೊಂಡ ಸಿದ್ಧತಾ ಕಾರ್ಯದ ಕುರಿತು ಡಿ.ಸಿ. ಅವರಿಗೆ ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ನಗರ ಪೊಲೀಸ್ ಉಪ ಆಯುಕ್ತ ಪ್ರವೀಣ ಎಚ್. ನಾಯಕ್, ಜಿಲ್ಲಾ ಕೌಲಶ್ಯಾಭಿವೃದ್ಧಿ ಅಧಿಕಾರಿ ನಾಗುಬಾಯಿ, ಐ.ಟಿ.ಐ(ಮೆನ್ಸ್) ಪ್ರಾಂಶುಪಾಲ ಮುರಳಿಧರ‌ ರತ್ನಗಿರಿ, ಕೆ.ಕೆ.ಆರ್.ಟಿ.ಸಿ ಸಿ.ಟಿ.ಎಂ ಸಂತೊಷಕುಮಾರ, ವಿಭಾಗೀಯ ನಿಯಂತ್ರಣಾಧಿಕಾರಿ ಎಸ್.ಜಿ.ಗಂಗಾಧರ, ಡಿ.ಟಿ.ಓ ಈಶ್ವರ ಹೊಸಮನಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಉಪನಿರ್ದೇಶಕ ಅಬ್ದುಲ್ ಅಜೀಮ್‌, ಅಹಾರ ಇಲಾಖೆ ಉಪನಿರ್ದೇಶಕ ಭೀಮರಾಯ ಸೇರಿದಂತೆ ಇತರೆ ಅಧಿಕಾರಿಗಳು ಇದ್ದರು.

ಸೂಪರ್ ಸ್ಪೆಷಾಲಿಟಿ, ಕಿದ್ಚಾಯಿ ಆಸ್ಪತ್ರೆ ಅವರಣಕ್ಕೂ ಭೇಟಿ :

ಬುಧವಾರ ಕಲಬುರಗಿ ಜಿಮ್ಸ್ ಆಸ್ಪತ್ರೆ ಆವರಣದಲ್ಲಿ 116 ಕೋಟಿ ರೂ. ವೆಚ್ಚದಲ್ಲಿ‌ ನಿರ್ಮಿಸಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನೆ ಮತ್ತು 492 ಕೋಟಿ ರೂ. ಮೊತ್ತದ ವಿವಿಧ 9 ಕಾಮಗಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಂಕು ಸ್ಥಾಪನೆ ನೆರವೇರಿಸಿತ್ತಿರುವ ಹಿನ್ನೆಲೆಯಲ್ಲಿ ಡಿ.ಸಿ. ಬಿ.ಫೌಝಿಯಾ ತರನ್ನುಮ್ ಅವರು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಕಿದ್ವಾಯಿ ಆಸ್ಪತ್ರೆ ಆವರಣದಲ್ಲಿ ನಡೆಯುವ ವೇದಿಕೆ ಕಾರ್ಯಕ್ರಮದ ಸ್ಥಳ ಪರಿಶೀಲನೆ ಮಾಡಿದರು.

ಈ ಸಂದರ್ಭದಲ್ಲಿ ಜಿಮ್ಸ್ ನಿರ್ದೇಶಕ ಡಾ.ಉಮೇಶ್ ಎಸ್.ಆರ್., ವೈದ್ಯಕೀಯ ಅಧೀಕ್ಷಕ ಡಾ.ಶಿವಕುಮಾರ ಸಿ.ಆರ್., ಡಿ.ಎಚ್.ಓ ಡಾ.ಶರಣಬಸಪ್ಪ ಕ್ಯಾತನಾಳ, ಕಲಬುರಗಿ ತಹಶೀಲ್ದಾರ ಕೆ.ಆನಂದಶೀಲ್ ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News