Kalaburagi | ಕಲ್ಯಾಣ ಕರ್ನಾಟಕದಲ್ಲಿ ಪ್ಯಾಸೆಂಜರ್ ರೈಲು ಸೇವೆ ಪುನರಾರಂಭಕ್ಕೆ ಒತ್ತಾಯ
ಕಲಬುರಗಿ: ಕೋವಿಡ್-19 ಸಂದರ್ಭದಲ್ಲಿ ಸ್ಥಗಿತಗೊಂಡಿರುವ ಪ್ಯಾಸೆಂಜರ್ ರೈಲುಗಳನ್ನು ಕಲ್ಯಾಣ ಕರ್ನಾಟಕ ಭಾಗದಲ್ಲಿ ಪುನರಾರಂಭಿಸಿ, ಗ್ರಾಮೀಣ ಭಾಗದ ಪ್ರಮುಖ ರೈಲು ನಿಲ್ದಾಣಗಳಲ್ಲಿ ನಿಲುಗಡೆ ನೀಡಬೇಕು ಎಂದು ಅಖಿಲ ಕರ್ನಾಟಕ ದಲಿತ ಸೇನೆ ಒತ್ತಾಯಿಸಿದೆ.
ಮುಂಬೈಯಿಂದ ಆಗಮಿಸಿದ್ದ ಸೆಂಟ್ರಲ್ ರೈಲ್ವೆಯ ಜನರಲ್ ಮ್ಯಾನೇಜರ್ ರಾಜೀವ್ ಶ್ರೀವಾಸ್ತವ ಅವರನ್ನು ಗಾಣಗಾಪುರ ರೈಲು ನಿಲ್ದಾಣದಲ್ಲಿ ಅಖಿಲ ಕರ್ನಾಟಕ ದಲಿತ ಸೇನೆಯ ರಾಜ್ಯಾಧ್ಯಕ್ಷ ದತ್ತಾತ್ರೇಯ ಕುಡಕಿ ನೇತೃತ್ವದ ನಿಯೋಗ ಭೇಟಿ ಮಾಡಿ ಮನವಿ ಸಲ್ಲಿಸಿತು.
ನಿಯೋಗದ ಮನವಿಯಲ್ಲಿ, ಸೆಂಟ್ರಲ್ ರೈಲ್ವೆ ಈ ಭಾಗದ ರೈತರು, ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು ಮತ್ತು ವ್ಯಾಪಾರಸ್ಥರಿಗೆ ಪ್ರಮುಖ ಸಾರಿಗೆ ವ್ಯವಸ್ಥೆಯಾಗಿದ್ದು, ಕುಲಾಲಿ, ಗೌಡಗಾಂವ, ಹುಣಸಿಹಡಗಿಲ, ಸಾವಳಗಿ, ಬಬಲಾದ, ನಂದೂರ, ಮರತೂರ ಸೇರಿದಂತೆ ಕರ್ನಾಟಕ ಹಾಗೂ ಮಹಾರಾಷ್ಟ್ರದ ಹಲವು ಗ್ರಾಮಗಳ ಜನರಿಗೆ ಪ್ಯಾಸೆಂಜರ್ ರೈಲು ಸೇವೆ ಅತ್ಯಂತ ಅಗತ್ಯವಾಗಿದೆ ಎಂದು ತಿಳಿಸಲಾಗಿದೆ.
ಕೋವಿಡ್‌ಗೂ ಮುನ್ನ ರಾಯಚೂರು, ಸೋಲಾಪುರ, ವಿಜಯಪುರ, ಗುಂತಕಲ್ ಹಾಗೂ ಫಲಕ್ನಾಮ ಮಾರ್ಗಗಳಲ್ಲಿ ಸಂಚರಿಸುತ್ತಿದ್ದ ಪ್ಯಾಸೆಂಜರ್ ರೈಲುಗಳು ಇನ್ನೂ ಪೂರ್ಣ ಪ್ರಮಾಣದಲ್ಲಿ ಪುನರಾರಂಭವಾಗಿಲ್ಲ. ಇದರಿಂದ ಬಡ ಪ್ರಯಾಣಿಕರು ಹೆಚ್ಚುವರಿ ವೆಚ್ಚ ಮತ್ತು ತೊಂದರೆ ಅನುಭವಿಸುತ್ತಿದ್ದಾರೆ ಎಂದು ನಿಯೋಗ ಗಮನ ಸೆಳೆಯಿತು.
ಸೋಲಾಪುರ–ಫಲಕ್ನಾಮ, ಫಲಕ್ನಾಮ–ಕಲಬುರಗಿ, ಸೋಲಾಪುರ–ಗುಂತಕಲ್, ಕಲಬುರಗಿ–ಸೋಲಾಪುರ ಹಾಗೂ ಹೈದರಾಬಾದ್–ಕಲಬುರಗಿ ಮಾರ್ಗಗಳ ಪ್ಯಾಸೆಂಜರ್ ರೈಲುಗಳನ್ನು ಮರುಪ್ರಾರಂಭಿಸಬೇಕು ಎಂದು ಆಗ್ರಹಿಸಲಾಯಿತು.
ಗಾಣಗಾಪುರ ರೈಲು ನಿಲ್ದಾಣದಲ್ಲಿ ಎಲ್‌ಟಿಟಿ–ವಿಶಾಖಪಟ್ಟಣ, ಹೈದರಾಬಾದ್–ಪುಣೆ, ಸೋಲಾಪುರ–ಹಾಸನ, ಸಾಯಿನಗರ ಶಿರಡಿ ಹಾಗೂ ಮುಂಬೈ–ಕೋನಾರ್ಕ್ ಎಕ್ಸ್‌ಪ್ರೆಸ್ ರೈಲುಗಳಿಗೆ ನಿಲುಗಡೆ ನೀಡುವಂತೆ ಗ್ರಾಮಸ್ಥರ ಪರವಾಗಿ ಮನವಿ ಸಲ್ಲಿಸಲಾಯಿತು.
ಮನವಿಗೆ ಸ್ಪಂದಿಸಿದ ಜನರಲ್ ಮ್ಯಾನೇಜರ್ ರಾಜೀವ್ ಶ್ರೀವಾಸ್ತವ, ಈ ಬೇಡಿಕೆಗಳನ್ನು ಮುಂದಿನ ಸಭೆಯಲ್ಲಿ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಇದೇ ವೇಳೆ, ಮುಂಬೈ–ಬೆಂಗಳೂರು ನಡುವೆ ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ಹಾಗೂ ಕಲಬುರಗಿಯಿಂದ ದೆಹಲಿಗೆ ಹೊಸ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಸೇವೆ ಆರಂಭಿಸುವಂತೆ ದತ್ತಾತ್ರೇಯ ಕುಡಕಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಡಾ. ಹಣಮಂತರಾವ ಹೊಳಕುಂದಿ, ವೀರಯ್ಯ ಸ್ವಾಮಿ, ದಸ್ತಯ್ಯ ಗುತ್ತೇದಾರ, ಪ್ರಕಾಶ ಹಡಪಾದ, ಶರಣು ನೀಲೂರು, ಶರೀಫ್ ಚೌದರಿ, ಮಹಿಬೂಬ್ ಶೇಖ್, ಮಹಿಬೂಬ್‌ಗೌಸ್, ಮಹೇಶ್ ಗುತ್ತೇದಾರ, ಬಾಬು ಸಿಂಗೆ, ಸಿದ್ಧಪ್ಪ ನಾಡಗಿರಿ, ರಮೇಶ್ ನಾಡಗಿರಿ, ಶರಣು ಮೇಲಿನಕೇರಿ, ಕೃಷ್ಣ ಕಾನಳ್ಳಿ, ರಾಜ್ಯ ಗೌರವಾಧ್ಯಕ್ಷ ಆನಂದರಾಯ ಗಾಯಕವಾಡ, ಆಳಂದ ತಾಲೂಕಾಧ್ಯಕ್ಷ ಭೋಜರಾಜ ಜುಭ್ರೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.