ಯಡ್ರಾಮಿ | ಗಣೇಶೋತ್ಸವವನ್ನು ಶಾಂತಿ, ಸೌಹಾರ್ದತೆಯಿಂದ ಆಚರಿಸಿ: ಪಿಎಸ್ಐ ತಿಮ್ಮಯ್ಯ
ಯಡ್ರಾಮಿ: ಗಣೇಶೋತ್ಸವವನ್ನು ಶಾಂತಿ, ಸೌಹಾರ್ದತೆ ಹಾಗೂ ಭಕ್ತಿಭಾವದಿಂದ ಆಚರಿಸಬೇಕು. ಮೆರವಣಿಗೆಯಲ್ಲಿ ನಿಗದಿತ ಮಾರ್ಗ ಮತ್ತು ಸಮಯವನ್ನು ಕಟ್ಟುನಿಟ್ಟಾಗಿ ಪಾಲಿಸುವುದರ ಜೊತೆಗೆ ಧ್ವನಿವರ್ಧಕ ಬಳಕೆಗೆ ಸಂಬಂಧಿಸಿದ ನಿಯಮಗಳನ್ನು ಅನುಸರಿಸಬೇಕು ಎಂದು ಯಡ್ರಾಮಿ ಪೊಲೀಸ್ ಠಾಣೆಯ ಪಿಎಸ್ಐ ತಿಮ್ಮಯ್ಯ ಹೇಳಿದರು.
ಗಣೇಶೋತ್ಸವ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆ ಆವರಣದಲ್ಲಿ ನಡೆದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಚೋದನಕಾರಿ ಘೋಷಣೆಗಳು, ಗಲಾಟೆಗಳು ಹಾಗೂ ಯಾವುದೇ ಕಾನೂನುಬಾಹಿರ ಚಟುವಟಿಕೆಗಳಿಗೆ ಅವಕಾಶ ನೀಡಬಾರದು ಎಂದು ಗಣೇಶೋತ್ಸವ ಸಮಿತಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ, ಮೆರವಣಿಗೆ ಮತ್ತು ವಿಸರ್ಜನೆ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಸಮಿತಿ ಮುಖಂಡರು ಹಾಗೂ ಸಾರ್ವಜನಿಕರೊಂದಿಗೆ ಪೊಲೀಸರು ಚರ್ಚೆ ನಡೆಸಿದರು.
ಗಣೇಶೋತ್ಸವವನ್ನು ಶಾಂತಿಯುತವಾಗಿ ಮತ್ತು ಸೌಹಾರ್ದತೆಯಿಂದ ಆಚರಿಸಲು ಸಾರ್ವಜನಿಕರು ಹಾಗೂ ಗಣೇಶೋತ್ಸವ ಸಮಿತಿಗಳು ಪೊಲೀಸ್ ಇಲಾಖೆಯೊಂದಿಗೆ ಸಂಪೂರ್ಣ ಸಹಕಾರ ನೀಡುವಂತೆ ಪಿಎಸ್ಐ ತಿಮ್ಮಯ್ಯ ಮನವಿ ಮಾಡಿದರು.
ಈ ವೇಳೆ ಗೊಳ್ಳಾಲಪ್ಪಗೌಡ ಮಾಗಣಿಗೇರ, ರಾಜುಗೌಡ ಮಾಲಿಪಾಟೀಲ್, ಮಲ್ಲನಗೌಡ ಪಾಟೀಲ ಸಂಬಡ, ಭಾಗ್ಯವಂತ ಪವರ್, ಗೊಳಲಪ್ಪ ಗೆಜ್ಜೆ, ಮಲ್ಲು ಕುಸ್ತಿ, ದಳಪತಿಗೌಡ ಸೈದಾಪುರ, ಶಫಿವುಲ್ಲಾ ದಖನಿ ಸೇರಿದಂತೆ ಪೊಲೀಸ್ ಸಿಬ್ಬಂದಿ, ಗಣೇಶೋತ್ಸವ ಸಮಿತಿ ಮುಖಂಡರು ಹಾಗೂ ವಿವಿಧ ಸಮುದಾಯಗಳ ಮುಖಂಡರು ಇತರಿದ್ದರು.