ಕಲಬುರಗಿ: ಚಿತ್ತಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕಲಬುರಗಿಯ ಸುವನಾ ಪ್ರಕಾಶನದ ಸಂಯುಕ್ತ ಆಶ್ರಯದಲ್ಲಿ ಚಿತ್ತಾಪುರದ ವರುಣ ನಗರದ ಶ್ರೀ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಸಾಹಿತಿ, ಚಿತ್ರಕಲಾವಿದ ಉಮೇಶ್ ಬಾಬು ಎಂ. ಸಾಸಾಬಾಳ್ ಅವರ ‘ಮೌನಡಂಗುರ’ ಕವನ ಸಂಕಲನ ಹಾಗೂ ‘ಭಾವ ಬಂಧುರ’, ‘ಭಾವಭ್ರಂಗ’ ಗಜಲ್ ಸಂಕಲನಗಳನ್ನು ಲೋಕಾರ್ಪಣೆ ಮಾಡಲಾಯಿತು.

ನಾಡೋಜ ಡಾ. ಜೆ.ಎಸ್. ಖಂಡೇರಾವ, ಹಿರಿಯ ಮಕ್ಕಳ ಸಾಹಿತಿ ಎ.ಕೆ. ರಾಮೇಶ್ವರ ಸೇರಿದಂತೆ ಗಣ್ಯರು ಕೃತಿಗಳನ್ನು ಬಿಡುಗಡೆಗೊಳಿಸಿದರು.

ಹಿರಿಯ ಮಕ್ಕಳ ಸಾಹಿತಿ ಎ.ಕೆ. ರಾಮೇಶ್ವರ ಮಾತನಾಡಿ, ಉಮೇಶ್ ಬಾಬು ಅವರ ಗಜಲ್‌ಗಳನ್ನು ಓದಿದಾಗ, ಇಷ್ಟು ವರ್ಷ ಸಾಹಿತ್ಯ ಕೃಷಿ ಮಾಡಿದ ತಮಗೂ ಗಜಲ್ ಬರೆಯಬೇಕೆಂಬ ಆಸೆ ಮೂಡುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಪ್ರಾಚೀನ ನಾಗಾವಿ ಘಟಿಕ ಸ್ಥಾನದಿಂದಾಗಿ ಚಿತ್ತಾಪುರ ಪ್ರದೇಶವು ಐತಿಹಾಸಿಕ ಹಾಗೂ ಸಾಹಿತ್ಯಿಕ ಮಹತ್ವ ಹೊಂದಿದೆ. ಹಲವು ದಶಕಗಳಿಂದ ಇಲ್ಲಿ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳು ನಡೆಯುತ್ತಿವೆ. ಉಮೇಶ್ ಬಾಬು ರಚಿಸಿರುವ ಕವನ ಹಾಗೂ ಗಜಲ್‌ಗಳು ಪ್ರೌಢ ಸಾಹಿತ್ಯಿಕ ಗುಣಮಟ್ಟ ಹೊಂದಿವೆ ಎಂದು ಹೇಳಿದರು.

ಸಾಹಿತಿ ಲಿಂಗಾರೆಡ್ಡಿ ಸೇಡಂ ಅವರು ‘ಮೌನಡಂಗುರ’ ಕೃತಿಯ ಕುರಿತು ಮಾತನಾಡಿ, ಶೀರ್ಷಿಕೆಯ ಅರ್ಥಪೂರ್ಣತೆಯನ್ನು ವಿವರಿಸಿದರು. ಕವಿಯು ತಮ್ಮ ತಂದೆಗೆ ಅರ್ಪಿಸಿರುವ ಕವನದ ಭಾವತೀವ್ರತೆಯನ್ನು ಉಲ್ಲೇಖಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಕವಿ, ಸಾಹಿತಿ ಹಾಗೂ ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರು ಅವರು ‘ಭಾವ ಬಂಧುರ’ ಮತ್ತು ‘ಭಾವಭ್ರಂಗ’ ಗಜಲ್ ಸಂಕಲನಗಳನ್ನು ಪರಿಚಯಿಸಿದರು. ಸಾಮಾನ್ಯ ವ್ಯಕ್ತಿತ್ವದ ಚಿತ್ರಕಲಾವಿದನ ಆಂತರ್ಯದಲ್ಲಿ ಇಂತಹ ಅದ್ಭುತ ಕಾವ್ಯಪ್ರತಿಭೆ ಅಡಗಿರಬಹುದು ಎಂದು ಊಹಿಸುವುದೂ ಕಷ್ಟ. ಉಮೇಶ್ ಬಾಬು ಅತ್ಯುತ್ತಮ ಗಜಲ್‌ಗಳನ್ನು ರಚಿಸಿದ್ದಾರೆ ಎಂದು ಹೇಳಿ ಆಯ್ದ ಗಜಲ್‌ಗಳ ಭಾವಸೌಂದರ್ಯವನ್ನು ಸಭಿಕರಿಗೆ ಪರಿಚಯಿಸಿದರು.

ಈ ಸಂದರ್ಭದಲ್ಲಿ ಶರಣಬಸವೇಶ್ವರ ದೇವಸ್ಥಾನ ಸಮಿತಿಯ ಪದಾಧಿಕಾರಿ ಕೋಟೇಶ್ವರ ರೇಶ್ಮಿ ಅವರನ್ನು ಸನ್ಮಾನಿಸಲಾಯಿತು.

ಉಮೇಶ್ ಬಾಬು ಅವರ ಅಭಿಮಾನಿಗಳು ಕೂಡ ಅವರನ್ನು ಸತ್ಕರಿಸಿದರು. ಕಾರ್ಯಕ್ರಮದಲ್ಲಿ ದಿಗ್ಗಾವ್, ಮೊಗಲಾ, ಸಾತನೂರು ಸೇರಿದಂತೆ ವಿವಿಧ ಗ್ರಾಮಗಳ ಗಣ್ಯರು, ಹಿರಿಯ ಹಾಗೂ ಯುವ ಚಿತ್ರ-ಶಿಲ್ಪ ಕಲಾವಿದರು, ಸಾಹಿತಿಗಳು, ಹಿತೈಷಿಗಳು ಮತ್ತು ಲೇಖಕರ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor