ಕಲಬುರಗಿ: ಅಫಜಲಪುರ ತಾಲೂಕಿನ ಭೋಗನಳ್ಳಿ ಗ್ರಾಮದ ರೈತರ ಹೊಲಗಳಲ್ಲಿ ತೊಗರಿ ಬೆಳೆಯಲ್ಲಿ ಅಂತರ ಬೆಳೆಯಾಗಿ ಬೆಳೆದಿರುವ ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿದ ಆರ್‌ಎಸ್‌ಎಫ್‌ಎಚ್-700 ಹೈಬ್ರಿಡ್ ತಳಿಯ ಸೂರ್ಯಕಾಂತಿ ಬೆಳೆಯ ಕ್ಷೇತ್ರೋತ್ಸವವನ್ನು ಐಸಿಎಆರ್‌-ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಪ್ರಗತಿಪರ ರೈತ ಅಬ್ದುಲ್ ಲತೀಫ್ ಪಟೇಲ್ ಅವರ ಹೊಲದಲ್ಲಿ ಆಯೋಜಿಸಲಾಗಿತ್ತು.

ಕ್ಷೇತ್ರೋತ್ಸವದಲ್ಲಿ ಮಾತನಾಡಿದ ಕಲಬುರಗಿ ಕೃಷಿ ವಿಜ್ಞಾನ ಕೇಂದ್ರದ ಬೇಸಾಯಶಾಸ್ತ್ರ ವಿಜ್ಞಾನಿ ಡಾ. ಯುಸುಫ್ ಅಲಿ ನಿಂಬರಗಿ, ತೇವಾಂಶದ ಕೊರತೆಯ ನಡುವೆಯೂ ತೊಗರಿ ಬೆಳೆಯಲ್ಲಿ ಅಂತರ ಬೆಳೆಯಾಗಿ ಸೂರ್ಯಕಾಂತಿ ಬೆಳೆದು ರೈತರು ಯಶಸ್ಸು ಸಾಧಿಸಿದ್ದಾರೆ. ರೈತರು ಒಂದೇ ಬೆಳೆಗೆ ಸೀಮಿತರಾಗದೆ ಅಂತರ ಬೆಳೆ ಪದ್ಧತಿಯನ್ನು ಅಳವಡಿಸಿಕೊಂಡು ವಿವಿಧ ಬೆಳೆಗಳನ್ನು ಬೆಳೆಯುವುದರಿಂದ ಆರ್ಥಿಕವಾಗಿ ಹೆಚ್ಚಿನ ಲಾಭ ಪಡೆಯಬಹುದು ಎಂದರು.

ತೊಗರಿಯಲ್ಲಿ ಸೂರ್ಯಕಾಂತಿಯನ್ನು ಅಂತರ ಬೆಳೆಯಾಗಿ ಬೆಳೆಯುವುದರಿಂದ ಕಡಿಮೆ ಅವಧಿಯಲ್ಲಿ ಹೆಚ್ಚುವರಿ ಆದಾಯ ಗಳಿಸಲು ಸಾಧ್ಯವಿದೆ. ಕೃಷಿ ವಿಜ್ಞಾನ ಕೇಂದ್ರದಿಂದ ಇಂತಹ ಹಲವು ತಾಂತ್ರಿಕ ಮಾಹಿತಿಗಳನ್ನು ಪಡೆದು ಕೃಷಿಯಲ್ಲಿ ಅಳವಡಿಸಿಕೊಳ್ಳುವ ಮೂಲಕ ರೈತರು ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳಬಹುದು ಎಂದು ಸಲಹೆ ನೀಡಿದರು.

ಕೃಷಿ ವಿಜ್ಞಾನ ಕೇಂದ್ರದ ಮಣ್ಣು ವಿಜ್ಞಾನಿ ಡಾ. ಶ್ರೀನಿವಾಸ ಬಿ.ವಿ. ಮಾತನಾಡಿ, ರೈತರು ಮಣ್ಣಿನ ಪರೀಕ್ಷೆಯ ಆಧಾರದ ಮೇಲೆ ರಸಗೊಬ್ಬರಗಳನ್ನು ಬಳಸಬೇಕು. ಸಾವಯವ ಗೊಬ್ಬರಗಳ ಬಳಕೆಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಮಣ್ಣಿನ ಆರೋಗ್ಯ ಕಾಪಾಡಿ ಉತ್ತಮ ಇಳುವರಿ ಪಡೆಯಬಹುದು ಎಂದು ಹೇಳಿದರು.

ಭೋಗನಳ್ಳಿ ಗ್ರಾಮದ ರೈತರಾದ ಲತೀಫ್ ಪಟೇಲ್ ಹಾಗೂ ರಿಯಾಝ್‌ ಪಟೇಲ್ ಅವರು ಯಶಸ್ವಿಯಾಗಿ ಬೆಳೆದಿರುವ ಸೂರ್ಯಕಾಂತಿ ಬೆಳೆಯನ್ನು ಹಲವು ರೈತರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ರೈತರಾದ ಸಿದ್ದು ಹುಲಿ, ಸುಭಾಷ ಪಾಟೀಲ, ಈರಣ್ಣ ಸುತಾರ್, ಮಹಬೂಬ್ ನದಾಫ್, ಸಿಧನೂರ, ಬೊಗಪ್ಪ ಮಾಂಗ, ರಸೂಲ್ ಪಟೇಲ್ ಸೇರಿದಂತೆ ಹಲವು ರೈತರು ಹಾಗೂ ರೈತ ಮುಖಂಡರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor