ಎಸ್ಐಆರ್ ರದ್ದುಪಡಿಸುವಂತೆ ಆಗ್ರಹಿಸಿ ಅ.23 ರಂದು ಬೃಹತ್ ಪ್ರತಿಭಟನೆ: ಮಹೇಶ್ ಎಸ್. ಬಿ
ಕಲಬುರಗಿ: ಎಸ್ಐಆರ್ ಪ್ರಕ್ರಿಯೆಯನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಅಕ್ಟೋಬರ್ 23ರಂದು ನಗರದ ಸರ್ದಾರ್ ವಲ್ಲಭ ಭಾಯಿ ಪಟೇಲ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು ಎಂದು ಸಂಯುಕ್ತ ಹೋರಾಟ ಕರ್ನಾಟಕ ಸಮಿತಿಯ ಸಂಚಾಲಕ ಮಹೇಶ್ ಎಸ್.ಬಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್ಐಆರ್ ಅನ್ನು ತಕ್ಷಣವೇ ರದ್ದು ಮಾಡಬೇಕು, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ವಜಾಗೊಳಿಸಬೇಕು, ದೇಶಾದ್ಯಂತ ತೆಗೆದು ಹಾಕಲಾಗುತ್ತಿರುವ 13 ಕೋಟಿ ಮತದಾರರ ಹೆಸರುಗಳನ್ನು ಮರುಸೇರ್ಪಡೆ ಮಾಡಬೇಕೆಂದು ಒತ್ತಾಯಿಸಿದರು.
ರಾಜ್ಯದಲ್ಲಿ ತೀವ್ರ ಬರಗಾಲ ಪರಿಸ್ಥಿತಿ ಎದುರಾಗಿದ್ದು, ಸರ್ಕಾರ ಕೂಡಲೇ ಪರಿಹಾರ ಹಣವನ್ನು ಸಮರ್ಪಕವಾಗಿ ಬಿಡುಗಡೆಗೊಳಿಸಬೇಕು, ಗ್ರಾಮೀಣ ಜನರಿಗೆ ವರ್ಷವಿಡಿ ಉದ್ಯೋಗ ನೀಡಬೇಕು, ಎಕರೆಗೆ ಕನಿಷ್ಠ 50 ಸಾವಿರ ಪರಿಹಾರ ನೀಡಬೇಕು, ಕಬ್ಬು ಬೆಳೆಗಾರರ ಎಲ್ಲ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕೆಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಭೀಮಾಶಂಕರ ಮಾಡಿಯಾಳ, ಉಮಾಪತಿ ಪಾಟೀಲ್, ಪ್ರಭುದೇವ ಯಳಸಂಗಿ, ಭೀಮಶೆಟ್ಟಿ ಯಂಪಳ್ಳಿ, ಮರೆಯಪ್ಪ ಹಳ್ಳಿ, ಪಾಂಡುರಂಗ ಮಾವಿನಕರ್ ಮತ್ತಿತರರು ಇದ್ದರು.