ಕಲಬುರಗಿ | ಕ್ವಿಂಟಾಲ್ ತೊಗರಿಗೆ 12 ಸಾವಿರ ರೂ. ನಿಗದಿಗೆ ಶಾಸಕ ಅಲ್ಲಂಪ್ರಭು ಪಾಟೀಲ್ ಆಗ್ರಹ
ಅಲ್ಲಪ್ರಭು ಪಾಟೀಲ್
ಕಲಬುರಗಿ: ರೈತರ ಪ್ರತಿ ಕ್ವಿಂಟಾಲ್ ತೊಗರಿಗೆ 12 ಸಾವಿರ ರೂ. ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸುವಂತೆ ಒತ್ತಾಯಿಸಿ ಕೇಂದ್ರ ಸರಕಾರಕ್ಕೆ ರಾಜ್ಯದಿಂದ ನಿಯೋಗ ಹೋಗಬೇಕು ಎಂದು ರಾಜ್ಯ ಸರ್ಕಾರವನ್ನು ದಕ್ಷಿಣ ಮತಕ್ಷೇತ್ರ ಶಾಸಕ ಅಲ್ಲಪ್ರಭು ಪಾಟೀಲ್ ಒತ್ತಾಯಿಸಿದ್ದಾರೆ.
ಸದನದಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಮಾತನಾಡಿದ ಅವರು, ತೊಗರಿ ನಮ್ಮ ಭಾಗದ ವಾಣಿಜ್ಯ ಬೆಳೆಯಾದರೂ ಕೇಂದ್ರ ಸರಕಾರ ಬೆಂಬಲ ಬೆಲೆ ಹೆಚ್ಚಿಸುತ್ತಿಲ್ಲ. ಇಂದು ಕೇಂದ್ರ 12 ಸಾವಿರ ರೂ. ಕ್ವಿಂಟಾಲ್ ತೊಗರಿಗೆ ನಿಗದಿಪಡಿಸಿದಾಗ ಮಾತ್ರ ರೈತರಿಗೆ ಅನುಕೂಲವಾಗುತ್ತದೆ. ಇದನ್ನೇ ಕೇಂದ್ರಕ್ಕೆ ಮನವರಿಕೆ ಮಾಡಲು ನಾವು ನಿಯೋಗ ಹೋಗಬೇಕು ಎಂದರು.
ತೊಗರಿ ವಿಚಾರದಲ್ಲಿ ಕೇಂದ್ರ ಸರಕಾರ ಕೇವಲ ವರ್ತಕರ ಪರ ನೋಡುತ್ತಿದೆಯೇ ಹೊರತು ರೈತರ ಪರವಾಗಿಲ್ಲ. ರೈತರು ಮುಷ್ಕರ ಮಾಡಿದರೂ ಕ್ಯಾರೆ ಎನ್ನುತ್ತಿಲ್ಲ ಎಂದು ದೂರಿದರು.
ತೊಗರಿ ಬೇಸಾಯ, ಆಗುವ ವೆಚ್ಚ, ಫಸಲು, ಇಳುವರಿ ಇತ್ಯಾದಿ ವಿಚಾರಗಳಿರುವ ಸಮಗ್ರ ವರದಿ ಜೊತೆಗೇ ಶೀಘ್ರ ಕೇಂದ್ರಕ್ಕೆ ನಿಯೋಗ ಹೋಗಬೇಕು. ನಾವೆಲ್ಲರೂ ರೈತರ ಮಕ್ಕಳು, ಇದರಿಂದ ಕ್ವಿಂಟಾಲ್ ತೊಗರಿಗೆ 12 ಸಾವಿರ ರೂ. ಸಿಗುವಂತಾದಲ್ಲಿ ರೈತರಿಗೆ ಅನುಕೂಲವಾಗವಲಿದೆ ಎಂದು ಅಲ್ಲಂಪ್ರಭು ಪಾಟೀಲ್ ತಿಳಿಸಿದರು.