×
Ad

Kalaburagi | ಸಂಗೀತ ಮತ್ತು ಸಾಹಿತ್ಯ ಮಾನಸಿಕ ನೆಮ್ಮದಿಗೆ ಪೂರಕ : ನೀಲಕಂಠರಾವ ಮೂಲಗೆ

'ಸಂಗೀತ ಸ್ವರ ಸಂಗಮ' ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ

Update: 2026-06-26 20:50 IST

ಕಲಬುರಗಿ: ಹಂಸವೇಣಿ ಸಂಗೀತ ಸೇವಾ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ಸಹಯೋಗದಲ್ಲಿ ನಗರದ ಕಲಾ ಮಂಡಳಿ ಸಭಾಂಗಣದಲ್ಲಿ ಆಯೋಜಿಸಿದ್ದ ‘ಸಂಗೀತ ಸ್ವರ ಸಂಗಮ’ ಸಾಂಸ್ಕೃತಿಕ ಕಾರ್ಯಕ್ರಮವು ಸಂಭ್ರಮ ಹಾಗೂ ಸಾಂಸ್ಕೃತಿಕ ವೈಭವದೊಂದಿಗೆ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ದಕ್ಷಿಣ ಮತಕ್ಷೇತ್ರದ ಕಾಂಗ್ರೆಸ್ ಮುಖಂಡ ನೀಲಕಂಠರಾವ ಮೂಲಗೆ, ಸಂಗೀತ ಮತ್ತು ಸಂಸ್ಕೃತಿ ಸಮಾಜವನ್ನು ಒಗ್ಗೂಡಿಸುವ ಶಕ್ತಿಯಾಗಿದ್ದು, ಇಂತಹ ಕಾರ್ಯಕ್ರಮಗಳು ಯುವಜನರಲ್ಲಿ ಕಲೆಯ ಬಗ್ಗೆ ಆಸಕ್ತಿ ಬೆಳೆಸುವುದರ ಜೊತೆಗೆ ಕನ್ನಡ ಸಂಸ್ಕೃತಿಯ ಉಳಿವು ಮತ್ತು ಬೆಳವಣಿಗೆಗೆ ಸಹಕಾರಿಯಾಗುತ್ತವೆ ಎಂದು ಹೇಳಿದರು.

ಸಾಹಿತಿ ಡಾ. ಕೆ. ಗಿರಿಮಲ್ಲ ಮಾತನಾಡಿ, ಹರಿಯುವ ನೀರು, ಪಕ್ಷಿಗಳು ಹಾಗೂ ನಿಸರ್ಗದ ಪ್ರತಿಯೊಂದು ಅಂಶದಲ್ಲೂ ಸಂಗೀತದ ನಾದ ಅಡಗಿದೆ. ಭಾರತೀಯ ಸಂಸ್ಕೃತಿಯಲ್ಲಿ ಸಂಗೀತಕ್ಕೆ ವಿಶೇಷ ಸ್ಥಾನಮಾನವಿದ್ದು, ಕರ್ನಾಟಕದಲ್ಲಿ ಸಂಗೀತಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ. ರಾಜಮನೆತನಗಳ ಆಸ್ಥಾನಗಳಲ್ಲಿ ಕಲಾವಿದರಿಗೆ ಅಪಾರ ಗೌರವ ದೊರೆಯುತ್ತಿತ್ತು ಎಂದು ತಿಳಿಸಿದರು.

ಸಾಹಿತಿ ಡಾ. ವಿಶಾಲಾಕ್ಷಿ ವಿ. ಕರೆಡ್ಡಿ ಮಾತನಾಡಿ, ಸಂಗೀತ ಮತ್ತು ಸಾಹಿತ್ಯವು ಒಂದೇ ನಾಣ್ಯದ ಎರಡು ಮುಖಗಳಂತಿದ್ದು, ಅವು ಮಾನವನ ಮನಸ್ಸಿಗೆ ನೆಮ್ಮದಿ ಮತ್ತು ಸಾಂಸ್ಕೃತಿಕ ಅರಿವು ನೀಡುತ್ತವೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ವಿವಿಧ ಕಲಾವಿದರು ಸಂಗೀತ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿ ಪ್ರೇಕ್ಷಕರ ಮನರಂಜಿಸಿದರು. ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಸಂಸ್ಥೆಯ ಅಧ್ಯಕ್ಷೆ ಪ್ರಿಯಾಂಕಾ ಹೀರೆಮಣಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಪ್ರಾ. ಬಿ.ಎಚ್.ನಿರಗುಡಿ, ಪ್ರಸಾದ್ ಪಟ್ಟಣಕರ್, ಡಾ.ಚಂದ್ರಶೇಖರ ದೊಡ್ಡಮನಿ, ಪತ್ರಕರ್ತ ಶರಣಗೌಡ ಪಾಟೀಲ ಪಾಳಾ, ದತ್ತು ಎಚ್.ಭಾಸಗಿ, ಶಾಂತಲಿಂಗಯ್ಯ ಮಠಪತಿ, ಯಂಕಪ್ಪ (ಅಕ್ಷಯ) ಹಾಗೂ ಜ್ಯೋತಿ ಅಕ್ಷಯಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ವಿವಿಧ ಕಲಾವಿದರಿಂದ ಸಂಗೀತ, ನೃತ್ಯ ಹಾಗೂ ಜನಪದ ಕಲಾ ಪ್ರದರ್ಶನಗಳು ಜರುಗಿದ್ದು, ಪ್ರೇಕ್ಷಕರಿಂದ ಉತ್ತಮ ಮೆಚ್ಚುಗೆ ವ್ಯಕ್ತವಾಯಿತು. ಅನೇಕ ಗಣ್ಯರು, ಕಲಾವಿದರು ಹಾಗೂ ಸಾರ್ವಜನಿಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಗಾಯತ್ರಿ ಎಸ್ ಸ್ವಾಮಿ ನಿರೂಪಿಸಿದರು, ಕೃಷ್ಣಾ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News