ಆಳಂದ ತಾಲೂಕಿನ ಹಲವೆಡೆ ಮೊಹರಂ ಸಂಭ್ರಮ
ಆಳಂದ: ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಮೊಹರಂ ಹಬ್ಬವನ್ನು ಭಕ್ತಿ, ಶ್ರದ್ಧೆ ಹಾಗೂ ಸೌಹಾರ್ದತೆಯ ವಾತಾವರಣದಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಧರ್ಮ, ಜಾತಿ ಭೇದ ಮರೆತು ಹಿಂದೂ-ಮುಸ್ಲಿಂ ಬಾಂಧವರು ಒಗ್ಗಟ್ಟಿನಿಂದ ಪಾಲ್ಗೊಂಡು ಸಾಮರಸ್ಯದ ಸಂದೇಶ ಸಾರಿದ ದೃಶ್ಯಗಳು ತಾಲೂಕಿನಾದ್ಯಂತ ಕಂಡುಬಂದವು.
ಮೊಹರಂ ತಿಂಗಳ ಒಂಬತ್ತನೇ ರಾತ್ರಿ ಸಂಪ್ರದಾಯದಂತೆ ಅಲಾವಿ ಹಚ್ಚಿ ಅಗ್ನಿ ಬೆಳಗಿಸಲಾಯಿತು. ಹಜರತ್ ಇಮಾಮ್ ಹಸನ್ ಹಾಗೂ ಹುಸೇನ್ ಅವರ ತ್ಯಾಗವನ್ನು ಸ್ಮರಿಸುವ ಪದಗಳನ್ನು ಹಾಡುತ್ತ ಭಕ್ತರು ಅಲಾವಿಯ ಸುತ್ತ ಪ್ರದಕ್ಷಿಣೆ ಹಾಕಿದರು. ಕೆಲವೆಡೆ ಸಂಪ್ರದಾಯಬದ್ಧವಾಗಿ ‘ಅಲಾವಿ ಹೆಜ್ಜೆ’ ಕುಣಿತವೂ ನಡೆಯಿತು. ಅಲಾಯಿಪೀರರ ಉತ್ಸವ ಭಕ್ತಿಭಾವದಿಂದ ನೆರವೇರಿತು.
ತಾಲೂಕಿನ ಜಾವಳಿ (ಡಿ) ಗ್ರಾಮದಲ್ಲಿ ಹಿಂದೂ ಹಾಗೂ ಮುಸ್ಲಿಂ ಸಮುದಾಯದವರು ಒಗ್ಗಟ್ಟಿನಿಂದ ಮೊಹರಂ ಆಚರಿಸುವ ಮೂಲಕ ಧಾರ್ಮಿಕ ಸೌಹಾರ್ದತೆಗೆ ಮಾದರಿಯಾದರು. ಇದೇ ರೀತಿ ತಡಕಲ್, ಕವಲಗಾ, ಕೊಡಲಹಂಗರಗಾ, ಸಾಲೇಗಾಂವ, ಧಂಗಾಪೂರ, ಸರಸಂಬಾ, ಅಂಬೇವಾಡ, ಖಜೂರಿ, ನರೋಣಾ ಸೇರಿದಂತೆ ಅನೇಕ ಗ್ರಾಮಗಳಲ್ಲೂ ಮೊಹರಂ ಆಚರಣೆ ಶ್ರದ್ಧಾಭಕ್ತಿಯಿಂದ ನಡೆಯಿತು.
ಪಟ್ಟಣದ ಹಳೆಯ ಅನ್ಸಾರಿ ಮೊಹಲ್ಲಾದ ವಿವಿಧೆಡೆ ಪ್ರತಿಷ್ಠಾಪಿಸಲಾಗಿದ್ದ ಪಂಜಾಗಳಿಗೆ ಬೆಳಿಗ್ಗೆ ಪಾತಿಯಾ ನೆರವೇರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಸಾವಿರಾರು ಭಕ್ತರ ಸಮ್ಮುಖದಲ್ಲಿ ಪಂಜಾಗಳ ಭವ್ಯ ಮೆರವಣಿಗೆ ಹಳೆಯ ಅನ್ಸಾರಿ ಮೊಹಲ್ಲಾದಿಂದ ಹಳೆಯ ಕಮಾನ್‌ವರೆಗೆ ಸಾಗಿತು. ಮಾರ್ಗದುದ್ದಕ್ಕೂ ಭಕ್ತರು ಪ್ರಾರ್ಥನೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿದರು.
ನಂತರ ಪಂಜಾಗಳನ್ನು ಮರಳಿ ಮೊಹಲ್ಲಾಕ್ಕೆ ಕರೆತಂದು ಸಂಪ್ರದಾಯಬದ್ಧ ವಿಧಿ-ವಿಧಾನಗಳೊಂದಿಗೆ ಲಾಠಿ ಆಟ ಪ್ರದರ್ಶಿಸಲಾಯಿತು. ಆಗಮಿಸಿದ್ದ ಭಕ್ತರಿಗೆ ಶರಬತ್ ಹಾಗೂ ಪಾನಕ ವಿತರಿಸಿ ಆತಿಥ್ಯ ನೀಡಲಾಯಿತು. ಅಂತಿಮವಾಗಿ ಪಂಜಾಗಳ ವಿಸರ್ಜನೆಯೊಂದಿಗೆ ಧಾರ್ಮಿಕ ಕಾರ್ಯಕ್ರಮ ಸಂಪನ್ನಗೊಂಡಿತು.
ಮೊಹಲ್ಲಾದ ಜವಾಬ್ದಾರಿತ ಮುಖಂಡರಾದ ಸಾಧತ್ ಅನ್ಸಾರಿ ಕಾರಬಾರಿ ಹಾಗೂ ಯುಸೂಫ್ ಕಾರಬಾರಿ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಿಕೊಟ್ಟರು. ಫಾತೆಖಾನಿ ಅವರು ಪಾತಿಯಾ ನೆರವೇರಿಸಿದರು. ಈ ಸಂದರ್ಭದಲ್ಲಿ ನೂರಾರು ಭಕ್ತರು ಪೈತ್ರಾ ಕುಣಿತ ಪ್ರದರ್ಶಿಸಿ, ಹೂವಿನಿಂದ ಅಲಂಕರಿಸಿದ್ದ ಪಂಜಾಗಳ ದರ್ಶನ ಪಡೆದು ಭಕ್ತಿಭಾವದಿಂದ ಪ್ರಾರ್ಥಿಸಿದರು.
ಇದೇ ವೇಳೆ ತಾಲೂಕಿನ ಸುಂಟನೂರ ಗ್ರಾಮದ ಇಮಾಮ್ ಖಾಸೀಮ್ ಹಸನ್-ಹುಸೇನ್ ಅಲಾಯಿಪೀರ ಮಸೀದಿಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ‘ಮೊಹರಂ ಭಾವೈಕ್ಯತೆ ಕಾರ್ಯಕ್ರಮ’ ಆಯೋಜಿಸಲಾಯಿತು. ಈ ಸಂದರ್ಭದಲ್ಲಿ ಅಲಾಯಿಪೀರಗಳಿಗೆ ಗೌರವ ಸಲ್ಲಿಸುವುದರ ಜೊತೆಗೆ ಅಲಾಯಿಪೀರಗಳನ್ನು ಹೊತ್ತವರಿಗೆ ಸನ್ಮಾನಿಸಿ ಸೌಹಾರ್ದ ಮತ್ತು ಸಹಬಾಳ್ವೆಯ ಸಂದೇಶ ಸಾರಲಾಯಿತು.