×
Ad

ಕಲಬುರಗಿ | ಶರಣಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ

Update: 2025-11-23 20:34 IST

ಕಲಬುರಗಿ : ನಗರದ ಶರಣಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯದ ಆಶ್ರಯದಲ್ಲಿ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ. ಅಲ್ಲಮಪ್ರಭು ದೇಶಮುಖ್ ಮಾತನಾಡಿ, ಡಾ. ಶರಣಬಸಪ್ಪ ಅಪ್ಪಾಜಿ ಅವರ ಕನಸಿನಂತೆ ಶರಣಬಸವೇಶ್ವರ ಸಂಸ್ಥೆಯಲ್ಲಿ ಓದುತ್ತಿರುವ ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ಸ್ವತಂತ್ರವಾಗಿ ಬದುಕುತ್ತೇನೆ, ಓದುತ್ತೇನೆ, ಪ್ರಯತ್ನಿಸುತ್ತೇನೆ, ಸ್ವತಂತ್ರವಾಗಿ ಚಿಂತನೆಯನ್ನು ಮಾಡುತ್ತೇನೆ ಎನ್ನುವ ಕಲ್ಪನೆ ಬೆಳೆಯಬೇಕು. ವಿದ್ಯಾರ್ಥಿಗಳು ಉತ್ತಮ ಜ್ಞಾನವನ್ನು ಪಡೆದು, ಸುಂದರ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಹೇಳಿದರು.

ಹಿಂಗುಲಾಂಬಿಕಾ ಆಯುರ್ವೇದಿಕ್ ಕಾಲೇಜು ಮತ್ತು ಆಸ್ಪತ್ರೆ ಸಂಶೋಧನಾ ಸಂಸ್ಥೆಯ ಪ್ರಾಚಾರ್ಯ ಡಾ. ಅಲ್ಲಮ ಪ್ರಭು ಗುಡ್ಡ ಮಾತನಾಡಿ, ಪ್ರಕೃತಿಯನ್ನು ಆರಾಧಿಸಬೇಕು. ಪ್ರಕೃತಿ ದೇವತೆಯನ್ನು ನಾವು ರಕ್ಷಿಸಬೇಕು. ಪ್ರಕೃತಿಯಲ್ಲಿರುವ ಹಲವಾರು ಆಯುರ್ವೇದಿಕ್ ಗಿಡಮೂಲಿಕೆಗಳು ನಮ್ಮ ಆರೋಗ್ಯವನ್ನು ಕಾಪಾಡಲು ಹಾಗೂ ರಕ್ಷಣೆ ಮಾಡಲು ಸಹಕಾರಿಯಾಗಿದೆ ಎಂದು ತಿಳಿಸಿದರು.

ಕಾಲೇಜಿನ ಪ್ರಾಚಾರ್ಯರಾದ ಡಾ.ಬಿ ರಾಮಕೃಷ್ಣ ರೆಡ್ಡಿ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯು ನೀವು ಆಯ್ಕೆ ಮಾಡಿಕೊಂಡ ವಿಷಯವನ್ನು ಆಳವಾಗಿ ಅಧ್ಯಯನ ಮಾಡಬೇಕು. ಆ ವಿಷಯದಲ್ಲಿ ವಿದ್ಯಾರ್ಥಿ ಆಸಕ್ತಿ ಹೊಂದಿರಬೇಕು. ನಿರಂತರ ಪ್ರಯತ್ನವಿದ್ದಾಗ ಗುರಿ ಮುಟ್ಟಲು ಸಾಧ್ಯ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಡಾ.ಗಿರೀಶ್ ಜನ್ನಿ, ಡಾ. ರಾಮಗೋಲ್ ರಾಯ್, ಡಾ. ಲತಾದೇವಿ ಕರಿಕಲ್, ಪ್ರದೀಪ್, ಡಾ. ಅಮಿತ್ ಹೆಗಡೆ, ಡಾ. ಖನೀಝಾ ಫಾತಿಮಾ, ಪವನ್ ಮೋಹನ್ ರಾವ್  ಉಪಸ್ಥಿತರಿದ್ದರು.  

ವಿಚಾರ ಸಂಕಿರಣದಲ್ಲಿ ಶರಣಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯದ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳು, ಎನ್.ವಿ ಕಾಲೇಜಿನ ವಿದ್ಯಾರ್ಥಿಗಳು, ಗುಲ್ಬರ್ಗ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News