×
Ad

ಕಲಬುರಗಿ | ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಆ.1ರಂದು ರಾಜ್ಯಾದ್ಯಂತ ಪ್ರತಿಭಟನೆ : ಎ.ನಾರಾಯಣಸ್ವಾಮಿ

Update: 2025-07-25 19:31 IST

ಕಲಬುರಗಿ: ಸುಪ್ರಿಂಕೋರ್ಟ್ ಆದೇಶದಂತೆ ರಾಜ್ಯದಲ್ಲಿ ಒಳ ಮೀಸಲಾತಿ ಜಾರಿಗೆ ಮಾಡುವಂತೆ ಆಗ್ರಹಿಸಿ, ಆಗಸ್ಟ್ 1ರಂದು ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ಹಾಗೂ ಆ.10 ರ ನಂತರ ಅಸಹಕಾರ ಚಳವಳಿ ನಡೆಸಲಾಗುವುದು ಎಂದು ಕೇಂದ್ರದ ಮಾಜಿ ಸಚಿವ ಎ.ನಾರಾಯಣಸ್ವಾಮಿ ಹೇಳಿದ್ದಾರೆ.

ನಗರದಲ್ಲಿ ಖಾಸಗಿ ಹೋಟೆಲ್ ವೊಂದರಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಳ ಮೀಸಲಾತಿಗೆ ಆದೇಶ ನೀಡಿ ಆಗಸ್ಟ್ 1ಕ್ಕೆ ಒಂದು ವರ್ಷ ಪೂರ್ಣವಾಗುತ್ತದೆ. ಆದರೆ, ರಾಜ್ಯ ಕಾಂಗ್ರೆಸ್ ಸರ್ಕಾರ ಒಳ ಮೀಸಲಾತಿ ಅನುಷ್ಠಾನಕ್ಕಾಗಿ ಕಾಲಹರಣ ಮಾಡುತ್ತಿದೆ ಎಂದು ಆರೋಪಿಸಿದರು.

ಕಾಂಗ್ರೆಸ್ ಸರ್ಕಾರ ರಚನೆಯಾದ ಬಳಿಕ ಮೊದಲ ಸಚಿವ ಸಂಪುಟದಲ್ಲಿ ಒಳ ಮೀಸಲಾತಿ ಜಾರಿ ಮಾಡುವುದಾಗಿ ಪ್ರಣಾಳಿಕೆಯಲ್ಲಿ ಭರವಸೆ ನೀಡಿತ್ತು. ಈವರೆಗೂ ಅನುಷ್ಠಾನಕ್ಕೆ ತರದೇ ಸರ್ಕಾರ ಶೋಷಿತ ಸಮುದಾಯಕ್ಕೆ ನಿರ್ಲಕ್ಷಿಸುತ್ತಿದೆ. ಈ ಕುರಿತಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ. ಮಹಾದೇವಪ್ಪ ಅವರು ನೀಡಿದ್ದ ಭರವಸೆ ಹುಸಿಯಾಗಿದೆ ಎಂದು ವಾಗ್ದಾಳಿ ನಡೆಸಿದರು.

ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದ 3 ತಿಂಗಳಲ್ಲೇ ತೆಲಂಗಾಣ, 8 ತಿಂಗಳಲ್ಲಿ ಆಂಧ್ರಪ್ರದೇಶ ಸೇರಿದಂತೆ ಇತರೆ ರಾಜ್ಯಗಳಲ್ಲಿ ಅನುಷ್ಠಾನಗೊಳಿಸಲಾಗಿದೆ. ಆದರೆ, ರಾಜ್ಯದಲ್ಲಿ ಮಾತ್ರ ದತ್ತಾಂಶ ನೆಪವೊಡ್ಡಿ ಒಳ ಮೀಸಲಾತಿ ವಿರೋಧಿ ನೀತಿಯನ್ನು ಅನುರಿಸಲಾಗುತ್ತಿದೆ ಎಂದು ಆರೋಪಿಸಿದ ಅವರು, ತುಳಿತಕ್ಕೊಳಗಾದವರಿಗೆ ನಿಜವಾದ ನ್ಯಾಯ ದೊರೆಯಬೇಕಾದರೆ ಒಳ ಮೀಸಲಾತಿ ಅಗತ್ಯವಾಗಿದ್ದು, ಈ ಕೂಡಲೇ ಒಳಮೀಸಲಾತಿ ಕೊಟ್ಟರೆ ಎಂಬಿಬಿಎಸ್, ಐಐಟಿ, ನರ್ಸಿಂಗ್ ಕೋರ್ಸ್ ಸೇರಿದಂತೆ ವಿವಿಧ ಟೆಕ್ನಿಕಲ್ ಕೋರ್ಸ್ ಮತ್ತು ಉದ್ಯೋಗ ಪಡೆಯಲು ಅನುಕೂಲವಾಗುತ್ತದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಶಾಸಕ ಬಸವರಾಜ ಮತ್ತಿಮಡು, ಉಮೇಶ್ ಜಿ. ಕಾರಜೋಳ, ಗೋಪಾಲರಾವ ಕಟ್ಟಿಮನಿ, ರಾಜು ವಾಡೇಕರ್ ಸೇರಿದಂತೆ ಮತ್ತಿತರರು ಮಾದಿಗ ಸಮುದಾಯದ ಮುಖಂಡರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News