×
Ad

ಕಲಬುರಗಿ| ಮೊಬೈಲ್ ಬಿಟ್ಟು ಓದಿನತ್ತ ಗಮನಹರಿಸಿ: ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣಾಧಿಕಾರಿ ಶೃತಿ ಎಂ.ಕಿವಿಮಾತು

Update: 2025-11-29 19:21 IST

ಕಲಬುರಗಿ: ವಿದ್ಯಾರ್ಥಿಗಳು ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಮೂಲ್ಯ ಸಮಯವನ್ನು ವ್ಯಯಿಸುವ ಬದಲು, ಓದು ಮತ್ತು ವ್ಯಕ್ತಿತ್ವ ವಿಕಸನಕ್ಕೆ ಹೆಚ್ಚಿನ ಮಹತ್ವ ನೀಡಿದಾಗ ಮಾತ್ರ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂದು ಚಿಂಚೋಳಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಶೃತಿ ಎಮ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಚಿಂಚೋಳಿ ತಾಲೂಕಿನ ಕಲ್ಲೂರ ರೋಡ್ ಗ್ರಾಮದ ಅಂಬಿಗರ ಚೌಡಯ್ಯ ಶಿಕ್ಷಣ ಸಂಸ್ಥೆಯ ಶ್ರೀ ವೀರಭದ್ರೇಶ್ವರ ಕನ್ನಡ ಪ್ರಾಥಮಿಕ ಶಾಲೆ ಹಾಗೂ ಆರ್.ಎಂ.ಎನ್.ಆರ್. ಕನ್ನಡ ಪ್ರೌಢಶಾಲೆಯಲ್ಲಿ, ಯುನಿಟಿ ಆಫ್ ಮೂಲನಿವಾಸಿ ಬಹುಜನ ಸಮಾಜ ಸಂಘಟನೆ ವತಿಯಿಂದ ಹಮ್ಮಿಕೊಂಡಿದ್ದ 'ಮಹಾಪುರುಷರ ಜೀವನ ಸಂದೇಶ ಅಭಿಯಾನ' ಹಾಗೂ ಮಹಾತ್ಮ ಜ್ಯೋತಿಬಾ ಫುಲೆ ಅವರ 135ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಜ್ಯೋತಿಬಾ ಫುಲೆ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಹಿತದೃಷ್ಟಿಯಿಂದ ಹಾಗೂ ಸಾಮಾನ್ಯ ಜ್ಞಾನದ ವೃದ್ಧಿಗಾಗಿ ಮಾತ್ರ ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಳ್ಳಬೇಕು. ಇದರೊಂದಿಗೆ ನಮ್ಮ ಪೂರ್ವಜರ ಇತಿಹಾಸವನ್ನು ಮೆಲುಕು ಹಾಕುವ ಮೂಲಕ ಉತ್ತಮ ಸಂಸ್ಕಾರವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು. 

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಾರುತಿ ಗಂಜಗಿರಿ ಮಾತನಾಡಿ, "ನಮ್ಮ ಜೀವನದಲ್ಲಿ ನೋವು-ನಲಿವುಗಳು ಬರುವುದು ಸಹಜ. ಮಹಾಪುರುಷರ ಜೀವನದಲ್ಲೂ ಅನೇಕ ಕಷ್ಟಗಳು ಬಂದಿದ್ದವು. ಆದರೆ ಅವರು ಎದೆಗುಂದದೆ ಮುನ್ನಡೆದರು. ಅವರ ಇತಿಹಾಸ ಮತ್ತು ಹೋರಾಟವನ್ನು ಅರಿತರೆ ನಮ್ಮ ಬದುಕು ಆದರ್ಶಮಯವಾಗುತ್ತದೆ" ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶಾಲೆಯ ಮುಖ್ಯ ಶಿಕ್ಷಕ ಗಣಪತಿ ದೇವಕೆತ್ತೆ, "ವಿದ್ಯಾರ್ಥಿಗಳು ಜೀವನದಲ್ಲಿ ಏನಾದರೂ ಸಾಧಿಸಬೇಕಾದರೆ ಮುಂದೆ ಗುರಿ - ಹಿಂದೆ ಗುರು ಇರಬೇಕು. ವಿದ್ಯಾರ್ಥಿಗಳು ತಮಗೆ ವಿದ್ಯೆ ಕಲಿಸುವ ಗುರುಗಳಿಗೆ ಮತ್ತು ಜನ್ಮ ನೀಡಿದ ತಂದೆ-ತಾಯಿಗಳಿಗೆ ಗೌರವ ಕೊಡುವ ಸಂಸ್ಕಾರವನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮವನ್ನು ಭೀಮರಾವ್ ಪೂಜಾರಿ ನಿರೂಪಿಸಿದರು. ಹರೀಶ್‌ ದೇಗಲ್ಮಡಿ ವಂದಿಸಿದರು. ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸಂಘಟನೆಯ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.








Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News