×
Ad

Kalaburagi | ಪುಸ್ತಕ ಓದುವುದರಿಂದ ಮಾನಸಿಕ ನೆಮ್ಮದಿ :ಅಕ್ಕೋಣೆ

Update: 2026-06-05 17:49 IST

ಕಲಬುರಗಿ: ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳುವುದರಿಂದ ಮಾನಸಿಕ ನೆಮ್ಮದಿ ಹಾಗೂ ಶಾಂತಿ ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಕನ್ನಡ ನಾಡು ಲೇಖಕರ ಸಂಘದ ಅಧ್ಯಕ್ಷ ಅಪ್ಪಾರಾವ ಅಕ್ಕೋಣೆ ಹೇಳಿದರು.

ನಗರದ ಕಮಲನಗರದಲ್ಲಿರುವ ಡಾ. ಶರಣಬಸಪ್ಪ ವಡ್ಡನಕೇರಿ ಅವರ ನಿವಾಸದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ‘ಮನೆಗೊಂದು ಗ್ರಂಥಾಲಯ’ ಯೋಜನೆಯಡಿ ಗ್ರಂಥಾಲಯ ಉದ್ಘಾಟಿಸಿ ಅವರು ಮಾತನಾಡಿದರು.

ಒಳ್ಳೆಯ ಪುಸ್ತಕಗಳನ್ನು ಓದುವ ಅಭ್ಯಾಸವು ವ್ಯಕ್ತಿಯ ಆರೋಗ್ಯ ಹಾಗೂ ಸಮಾಜದ ಸುಧಾರಣೆಗೆ ಸಹಕಾರಿಯಾಗುತ್ತದೆ. ಒಬ್ಬ ವ್ಯಕ್ತಿಯನ್ನು ಉತ್ತಮ ಮನುಷ್ಯನನ್ನಾಗಿ ರೂಪಿಸುವ ಶಕ್ತಿ ಪುಸ್ತಕಗಳಿಗಿದೆ. ಇತ್ತೀಚಿನ ದಿನಗಳಲ್ಲಿ ದೃಶ್ಯ ಮಾಧ್ಯಮಗಳ ಪ್ರಭಾವದಿಂದ ಓದುವ ಹವ್ಯಾಸ ಕಡಿಮೆಯಾಗುತ್ತಿದ್ದು, ಪುಸ್ತಕ ಖರೀದಿ ಮತ್ತು ಓದುವ ಸಂಸ್ಕೃತಿಯನ್ನು ಬೆಳೆಸಲು ಇಂತಹ ಯೋಜನೆಗಳು ಅಗತ್ಯವೆಂದು ಹೇಳಿದರು.

ಸರಕಾರಿ ಮಹಿಳಾ ಪದವಿ ಮಹಾವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ಶಿವಶರಣಪ್ಪ ಬಿರಾದಾರ ಮಾತನಾಡಿ, ಪುಸ್ತಕಗಳು ಮನುಷ್ಯನ ಬೌದ್ಧಿಕ ಹಾಗೂ ಮಾನಸಿಕ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡುತ್ತವೆ. ಹೆಚ್ಚು ಪುಸ್ತಕಗಳನ್ನು ಓದಿದಷ್ಟೂ ಜ್ಞಾನದ ವಿಸ್ತಾರ ಮತ್ತು ಅಜ್ಞಾನದ ಅರಿವು ಹೆಚ್ಚಾಗುತ್ತದೆ ಎಂದು ತಿಳಿಸಿದರು.

ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯ ಬಿ.ಎಚ್. ನಿರಗುಡಿ ಮಾತನಾಡಿ, “ಪುಸ್ತಕಗಳ ಮೂಲಕ ಮನುಕುಲದ ಸೇವೆ” ಎಂಬ ಧ್ಯೇಯದೊಂದಿಗೆ ಪ್ರಾಧಿಕಾರ ನಡೆಸುತ್ತಿರುವ ‘ಮನೆಗೊಂದು ಗ್ರಂಥಾಲಯ’ ಯೋಜನೆ ಉತ್ತಮ ಸ್ಪಂದನೆ ಪಡೆದಿದೆ. ತಮ್ಮ ಮನೆಯಲ್ಲಿ ಅಚ್ಚುಕಟ್ಟಾಗಿ ಗ್ರಂಥಾಲಯ ರೂಪಿಸಿರುವ ಡಾ. ಶರಣಬಸಪ್ಪ ವಡ್ಡನಕೇರಿ ಅವರನ್ನು ಅಭಿನಂದಿಸಲಾಯಿತು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಿದ್ದಲಿಂಗ ಬಿ. ಕೊನೇಕ ಮಾತನಾಡಿ, ಮನೆಯಲ್ಲಿ ಗ್ರಂಥಾಲಯವಿದ್ದರೆ ಮಕ್ಕಳ ಶೈಕ್ಷಣಿಕ ಸಾಧನೆ, ಶಬ್ದಸಂಪತ್ತು, ಓದಿನ ಆಸಕ್ತಿ ಹಾಗೂ ಉದ್ಯೋಗಾವಕಾಶಗಳ ಬೆಳವಣಿಗೆಗೆ ನೆರವಾಗುತ್ತದೆ. ಪುಸ್ತಕಗಳ ಪರಿಚಯ ಮಕ್ಕಳಲ್ಲಿ ದೀರ್ಘಕಾಲೀನ ಜ್ಞಾನ ಮತ್ತು ಚಿಂತನಶಕ್ತಿಯನ್ನು ಬೆಳೆಸುತ್ತದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಜಾಗೃತಿ ಸಮಿತಿಯ ಸದಸ್ಯರಾದ ರೇವಣಸಿದ್ದಪ್ಪ ದುಕಾನ, ಶೋಭಾದೇವಿ ಚೆಕ್ಕಿ,ಡಾ. ನಾಗಪ್ಪ ಗೋಗಿ ಡಾ.ಪರ್ವೀನ ಸುಲ್ತಾನ, ಕಾಶೀನಾಥ ಪಾಟೀಲ, ಶಿವಾನಂದ ಕಶೆಟ್ಟಿ, ವಿಶ್ವನಾಥ ಬಕರೆ,ಶಿವರಾಜ ಕಾಳಗಿ, ಮಲ್ಲಮ್ಮ ಕಾಳಗಿ, ವಿಶ್ವನಾಥ ಹರಕಂಚಿ, ಕಾಶಿಬಾಯಿ ಹರಕಂಚಿ,ಅಂಬಾರಾವ ವಡ್ಡ ನಕೇರಿ, ಲಕ್ಷ್ಮಿ ಪ್ರತಾಪಅಂಬಾಡೆ, ಶ್ವೇತಾ ವಡ್ಡನಕೇರಿ ಇದ್ದರು.ಶಿಕ್ಷಕ ಅಂಬಾರಾಯ ಮಡ್ದೆ ನಿರೂಪಿಸಿದರು ಡಾ. ನಾಗಪ್ಪ ಗೋಗಿ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News