×
Ad

ಕಲಬುರಗಿ | ಸರಣಿ ಕಳ್ಳತನ ಪ್ರಕರಣ: ಆರೋಪಿಯ ಬಂಧನ, 8.50 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ

Update: 2025-11-27 23:15 IST

ಕಲಬುರಗಿ: ಅಶೋಕ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಮೂರು ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಧಿಸಿ, ಆತನಿಂದ 8.50 ಮೌಲ್ಯದ ಚಿನ್ನಾಭರಣ ಮತ್ತು 10 ಸಾವಿರ ನಗದು ಹಣ ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ ತಿಳಿಸಿದ್ದಾರೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ.ಶರಣಪ್ಪ ಎಸ್.ಡಿ, ನಗರದ ಹೀರಾಪುರ ಪ್ರದೇಶದ ನಿವಾಸಿ ಚಾಂದಪಾಷಾ (25) ಬಂಧಿತ ಆರೋಪಿಯಾಗಿದ್ದಾನೆ. ಈತ ಜೂಜಾಟ ಹಾಗೂ ಕುಡಿತದ ಚಟಕ್ಕಾಗಿ ಹಗಲಲ್ಲೇ ಮನೆ ಕಳ್ಳತನಗಳನ್ನು ಮಾಡುತ್ತಿದ್ದ ಎಂದು ಹೇಳಿದರು.

ಅಕ್ಟೋಬರ್‌ ಹಾಗೂ ನವೆಂಬರ್‌ ತಿಂಗಳಲ್ಲಿ ಅಶೋಕನಗರ ಠಾಣಾ ವ್ಯಾಪ್ತಿಯ ಮೂರು ಮನೆಗಳಲ್ಲಿ ಕಳ್ಳತನ ಪ್ರಕರಣಗಳು ದಾಖಲಾಗಿದ್ದವು. ಒಟ್ಟು 15 ಲಕ್ಷ ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಆಭರಣಗಳು ಕಳ್ಳತನವಾಗಿದ್ದವು. ಆ ಪೈಕಿ ಬಂಧಿತ ಆರೋಪಿಯಿಂದ 8 ಲಕ್ಷ ಮೌಲ್ಯದ 83 ಗ್ರಾಂ ಚಿನ್ನಾಭರಣ, 50 ಸಾವಿರ ಮೌಲ್ಯದ 30 ಗ್ರಾಂ ಬೆಳ್ಳಿ ಆಭರಣ ಹಾಗೂ 10 ಸಾವಿರ ನಗದು ಹಣವನ್ನು ವಶಕ್ಕೆ ಪಡೆಯಲಾಗಿದೆ ಎಂದು ವಿವರಿಸಿದರು.

ದಕ್ಷಿಣ ಉಪವಿಭಾಗದ ಎಸಿಪಿ ಶರಣಬಸಪ್ಪ ಸುಬೇದಾರ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್‌ ಅರುಣ್‌ ಕುಮಾರ್‌, ಎಎಸ್‌ಐ ಶೈಲಜಾ, ವೈಜಿನಾಥ, ಮಲ್ಲಿಕಾರ್ಜುನ, ಶಿವಪ್ರಕಾಶ, ನೀಲಕಂಠರಾಯ, ಚಂದ್ರಶೇಖರ, ಮುಜಾಹೀದ್‌ ಅವರಿದ್ದ ತಂಡವು  ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದರು. 

ಸುದ್ದಿಗೋಷ್ಠಿಯಲ್ಲಿ ಎಸಿಪಿ ಶರಣಬಸಪ್ಪ ಸುಬೇದಾರ, ಪಿಐ ಅರುಣಕುಮಾರ್‌ ಉಪಸ್ಥಿತರಿದ್ದರು.  

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News