ಕಲಬುರಗಿ| ವಂಚಿತ ರೈತರಿಗೆ ಬೆಳೆ ಪರಿಹಾರ ನೀಡಿ: ಶರಣಬಸಪ್ಪ ಮಮಶೆಟ್ಟಿ ಆಗ್ರಹ
ಕಲಬುರಗಿ: ಅತಿವೃಷ್ಟಿಯಿಂದಾಗಿರುವ ಬೆಳೆ ಹಾನಿಗೆ ಸರಕಾರ ನೀಡಿರುವ ಪರಿಹಾರದಲ್ಲಿ ಸುಮಾರು 12,313 ರೈತರಿಗೆ ಪರಿಹಾರ ಬರದಂತಾಗಿ ವಂಚನೆಯಾಗಿದೆ. ಕೂಡಲೇ ಸರಿಪಡಿಸಿ ಸಂಕಷ್ಟದಲ್ಲಿರುವ ರೈತರಿಗೆ ಪರಿಹಾರ ನೀಡಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘದ ಶರಣಬಸಪ್ಪ ಮಮಶೆಟ್ಟಿ ಆಗ್ರಹಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಶರಣಬಸಪ್ಪ ಮಮಶೆಟ್ಟಿ, ಜಿಲ್ಲೆಯಲ್ಲಿ ಅತಿವೃಷ್ಟಿಯಿಂದಾಗಿರುವ ಹಾನಿಗೆ ವರಿಹಾರಕ್ಕಾಗಿ ನೊಂದಾಯಿಸಿಕೊಂಡಿರುವ 4,17,000 ರೈತರು ಮತ್ತು ಎಫ್‌ಐಡಿ ನಂಬರ್ ಹೊಂದಿರುವ 3,17,000 ರೈತರಿಗೆ ಪರಿಹಾರ ಯಾವ ಆಧಾರದ ಮೇಲೆ ನೀಡಲಾಗಿದೆ ಎಂದು ತಿಳಿಯುತ್ತಿಲ್ಲ, ಆದರೆ ಇನ್ನೂ 12,313 ರೈತರು ಪರಿಹಾರದಿಂದ ವಂಚಿತರಾಗಿದ್ದಾರೆಂದು ತಿಳಿಸಿದರು.
ಬೆಳೆ ಪರಿಹಾರದಲ್ಲಿ ಬಾಕಿ ಇರುವ 35 ಕೋಟಿ ಹಣವನ್ನು ಸರಕಾರ ಕೂಡಲೇ ರೈತರ ಖಾತೆಗೆ ಜಮೆ ಮಾಡಬೇಕು. ಬೆಳೆಹಾನಿ ಸಂದರ್ಭದಲ್ಲಿ ವಿಲೇಜ್ ಅಕೌಂಟೆಂಟ್ ಅವರು ಎಲ್ಲೋ ಕುಳಿತು ಸಮೀಕ್ಷೆ ಮಾಡಿದ್ದರಿಂದ ಈಗ ರೈತರು ಸಂಕಷ್ಟದಲ್ಲಿದ್ದಾರೆ. ಹಾಗಾಗಿ ಇದನ್ನು ಗಂಭೀರವಾಗಿ ಪರಿಗಣಿಸಿ ಸರಕಾರ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ಒಂದು ವೇಳೆ ಇದಕ್ಕೆ ವಿಳಂಬ ನೀತಿ ಅನುಸರಿಸಿದರೆ ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಜಂಟಿ ಸಂಘಟನೆಗಳ ಆಶ್ರಯದಲ್ಲಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ವೀರಣ್ಣಾ ಗಂಗಾಣೆ, ಶಿವರಾಜ್ ಪಾಟೀಲ್, ಸಿದ್ದು ತೆಂಗಳಿ, ಕರೆಪ್ಪಾ ಕರಗೊಂಡ, ಸಿದ್ದು ಎಸ್.ಎಲ್, ಪ್ರಭಾಕರ್, ಸತೀಶ್ ಹೆಬ್ಬಾಳ, ಶಿವಪುತ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು.