ಶಹಾಬಾದ್ | ಶಿಕ್ಷಕರು ಮಕ್ಕಳಲ್ಲಿ ಮಾನವೀಯ ಮೌಲ್ಯ, ಸಂಸ್ಕಾರ ಬೆಳೆಸಬೇಕು: ಮಲ್ಲಿನಾಥ ರಾವೂರ
ಶಹಾಬಾದ್ : ಶಿಕ್ಷಕ ವೃತ್ತಿ ಕೇವಲ ಜ್ಞಾನ ನೀಡುವ ವೃತ್ತಿಯಲ್ಲ. ನಾಲ್ಕು ಗೋಡೆಗಳ ಮಧ್ಯೆ ಭವಿಷ್ಯದ ರಾಷ್ಟ್ರ ನಿರ್ಮಾಣ ಮಾಡುವ ಮಹತ್ವದ ಜವಾಬ್ದಾರಿ ಶಿಕ್ಷಕರ ಮೇಲಿದೆ. ಶಿಕ್ಷಕರು ತಮ್ಮ ಜ್ಞಾನದೊಂದಿಗೆ ಮಕ್ಕಳಲ್ಲಿ ಮಾನವೀಯ ಮೌಲ್ಯಗಳು, ಉತ್ತಮ ಸಂಸ್ಕೃತಿ ಹಾಗೂ ಸಂಸ್ಕಾರಗಳನ್ನು ಬೆಳೆಸುವ ಕೆಲಸ ಮಾಡಬೇಕು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿನಾಥ ರಾವೂರ ಹೇಳಿದರು.
ನಗರದ ರಾಯಲ್ ಗಾರ್ಡನ್ ಸಭಾಂಗಣದಲ್ಲಿ ಜಿಲ್ಲಾ ಪಂಚಾಯಿತಿ ಶಾಲಾ ಶಿಕ್ಷಣ ಇಲಾಖೆ, ಚಿತ್ತಾಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ, ಪದವೀಧರ, ಅನುದಾನಿತ ಮತ್ತು ಪ್ರೌಢಶಾಲಾ ಶಿಕ್ಷಕರ ತಾಲೂಕು ಸಂಘದ ವತಿಯಿಂದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ 2026-27ನೇ ಸಾಲಿನ ಶಿಕ್ಷಕರ ದಿನಾಚರಣೆ, ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಹಾಗೂ ನಿವೃತ್ತ ಶಿಕ್ಷಕರಿಗೆ ಗೌರವ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ ಬಿರಾದಾರ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಮಾನವೀಯ ಮೌಲ್ಯಗಳು ಹಾಗೂ ಕನಿಷ್ಠ ಸೌಜನ್ಯ ಕಡಿಮೆಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ವಿಷಯ ಜ್ಞಾನ ನೀಡುವುದರ ಜೊತೆಗೆ ಮಕ್ಕಳಿಗೆ ಮನೆ ಹಾಗೂ ಶಾಲೆಯಲ್ಲಿ ಮಾನವೀಯ ಮೌಲ್ಯಗಳನ್ನು ಕಲಿಸುವ ಅಗತ್ಯವಿದೆ. ಮಕ್ಕಳಲ್ಲಿ ಉತ್ತಮ ನಡವಳಿಕೆ, ಪರಸ್ಪರ ಗೌರವ ಹಾಗೂ ಸಾಮಾಜಿಕ ಜವಾಬ್ದಾರಿಯ ಮನೋಭಾವ ಬೆಳೆಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಶಿವಶರಣಪ್ಪ ಮಂಠಾಳೆ, ಕ್ಷೇತ್ರ ಸಮನ್ವಯ ಅಧಿಕಾರಿ ಆದಪ್ಪ ಸಜ್ಜನ್, ಅಕ್ಷರ ದಾಸೋಹ ಅಧಿಕಾರಿ ಶಂಕರ ಡಾಂಗೆ, ಪ್ರವೀಣ ಹೇರೂರ, ಲಲಿತಾಬಾಯಿ ದೇಸಾಯಿ, ಕಲಾವತಿ ಮದನಕರ್ ಹಾಗೂ ರೇಹನಾ ಪರವೀನ್ ಉಪಸ್ಥಿತರಿದ್ದರು.
ಸರಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಶಿವಪುತ್ರ ಕರಣಿಕ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉದಯ ಇಂಗಳೆ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಇತ್ತೀಚೆಗೆ ವಯೋನಿವೃತ್ತಿ ಹೊಂದಿದ ಶಿಕ್ಷಕರಿಗೆ ಗೌರವ ಸನ್ಮಾನ ಹಾಗೂ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಹಿಬೂಬ ಪಟೇಲ, ಶಶಿಕಾಂತ, ಮಹಾದೇವಿ ದೊಡ್ಡಮನಿ, ಸರೋಜಾ ಕುಲಕರ್ಣಿ, ಅರುಣಾ, ಅಜಿಮುನೀಸಾ ಬೇಗಂ, ಮಹಾನಂದಾ ಗಾಯಕವಾಡ, ಸೈಯದ್ ಯುನೂಸ್, ಸತ್ಯನಾರಾಯಣ, ನಾಗುಬಾಯಿ, ಅಕ್ಷತಾ, ಲಕ್ಷ್ಮೀಕಾಂತ ರಾಕಾ, ಸ್ವರೂಪರಾಣಿ, ತಹಸೀನ ಬಾನು, ರಮಾ, ಸಂಗೀತಾ, ಭಾರತಿ, ಜಯಶ್ರೀಮಠ, ಸುಶೀಲಾಬಾಯಿ, ಪದ್ಮಾ ಪಾಟೀಲ, ಕಸ್ತೂರಿಬಾಯಿ ಠಾಕೂರ, ಚಂದ್ರಾವತಿ, ರವಿಕುಮಾರ, ನಾಗೇಶ್ವರಿ, ಇಂದ್ರಾಬಾಯಿ, ಮಹಾದೇವಿ, ಕಲಾವತಿ ಮದನಕರ್, ತಾರಕೇಶ್ವರಿ, ಗಂಗಮ್ಮ ಹುಗ್ಗಿ, ಸರಸ್ವತಿ, ವನಜಾ ಜಿ.ಕೆ., ಲಲಿತಾಬಾಯಿ ಕೊರಚಿ, ಸುಮಿತ್ರಾ ರಾಠೋಡ, ವಿಮಲಾ ಪಾಟೀಲ, ಆಸ್ಮಾ ಪರ್ವೀನ್, ರಿಜ್ವಾನಾ ಬೇಗಂ, ಫಹನಾ ಬೇಗಂ, ರುಕ್ಸಾನಾ ಬೇಗಂ, ಅಸ್ಮಾ ಬೇಗಂ ಹಾಗೂ ಖೈರುನ್ನೀಸಾ ಬೇಗಂ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.