Kalaburagi | ವಿಶೇಷ ಚೇತನರ ಹಕ್ಕು, ಸೌಲಭ್ಯಗಳ ಕುರಿತು ಕಾರ್ಯಾಗಾರ
ವಿಶೇಷ ಚೇತನರು ಹಕ್ಕು, ಸೌಲಭ್ಯಗಳ ಅರಿವು ಪಡೆದು ಸ್ವಾವಲಂಬಿಗಳಾಗಬೇಕು : ಶಾಸಕ ಅಲ್ಲಮಪ್ರಭು ಪಾಟೀಲ್
ಕಲಬುರಗಿ: ವಿಶೇಷ ಚೇತನರು ತಮ್ಮ ಹಕ್ಕುಗಳು ಹಾಗೂ ಸರ್ಕಾರದಿಂದ ದೊರೆಯುವ ವಿವಿಧ ಸೌಲಭ್ಯಗಳ ಕುರಿತು ಅರಿವು ಹೊಂದಿ ಸ್ವಾವಲಂಬಿ ಜೀವನ ನಡೆಸುವಂತಾಗಬೇಕು ಎಂಬ ಉದ್ದೇಶದಿಂದ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಕಲಬುರಗಿ ಹಾಗೂ ಭಾಗ್ಯೋದಯ ವೆಲ್ಫೇರ್ ಸೊಸೈಟಿ ವತಿಯಿಂದ ವಿಶೇಷ ಚೇತನರು ಹಾಗೂ ಅವರ ಪಾಲಕರಿಗಾಗಿ ಒಂದು ದಿನದ ಅರಿವು ಕಾರ್ಯಾಗಾರವನ್ನು ನಗರದ ಜಗತ್‌ನಲ್ಲಿರುವ ಭಾಗ್ಯೋದಯ ವೆಲ್ಫೇರ್ ಸೊಸೈಟಿಯಲ್ಲಿ ಆಯೋಜಿಸಲಾಗಿತ್ತು.
ಕಲಬುರಗಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಅವರು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ವಿಶೇಷ ಚೇತನರು ಸಮಾಜದ ಮುಖ್ಯವಾಹಿನಿಗೆ ಬರಲು ಅಗತ್ಯವಿರುವ ಅವಕಾಶಗಳನ್ನು ಕಲ್ಪಿಸುವುದು ಹಾಗೂ ಸರ್ಕಾರದ ವಿವಿಧ ಸೌಲಭ್ಯಗಳು ಅರ್ಹರಿಗೆ ಸಮರ್ಪಕವಾಗಿ ತಲುಪುವಂತೆ ನೋಡಿಕೊಳ್ಳುವುದು ಅತ್ಯಂತ ಮುಖ್ಯವಾಗಿದೆ ಎಂದು ಹೇಳಿದರು.
ಕಾರ್ಯಾಗಾರದಲ್ಲಿ ವಿಶೇಷ ಚೇತನರ ಹಕ್ಕುಗಳು, ಸಬಲೀಕರಣ, ಸರ್ಕಾರದ ವಿವಿಧ ಯೋಜನೆಗಳು ಹಾಗೂ ಸೌಲಭ್ಯಗಳ ಕುರಿತು ತಜ್ಞರಿಂದ ಮಾಹಿತಿ ನೀಡಲಾಯಿತು. ಸರ್ಕಾರದ ಸೌಲಭ್ಯಗಳನ್ನು ಪಡೆಯುವ ವಿಧಾನ, ಕಾನೂನು ರಕ್ಷಣೆ, ಶಿಕ್ಷಣ, ಉದ್ಯೋಗ, ಪುನರ್ವಸತಿ ಹಾಗೂ ಇತರ ಅಗತ್ಯ ಸೇವೆಗಳ ಕುರಿತು ವಿಶೇಷ ಚೇತನರು ಮತ್ತು ಅವರ ಪಾಲಕರಿಗೆ ಅರಿವು ಮೂಡಿಸಲಾಯಿತು.
ವಿಶೇಷ ಚೇತನರು ತಮ್ಮ ಹಕ್ಕುಗಳ ಕುರಿತು ತಿಳಿದುಕೊಂಡು ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಈ ಮೂಲಕ ಶಿಕ್ಷಣ, ಉದ್ಯೋಗ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಸ್ವಾವಲಂಬನೆ ಸಾಧಿಸಲು ಮುಂದಾಗಬೇಕು ಎಂದು ಕಾರ್ಯಾಗಾರದಲ್ಲಿ ತಿಳಿಸಲಾಯಿತು.
ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರ ಸಂಘದ ಕಾರ್ಯದರ್ಶಿ ನಾಗೇಂದ್ರ ಗುಳ್, ಲಾಲಾಜಿ, ಅರುಣಕುಮಾರ್, ಎಂಆರ್‌ಡಬ್ಲ್ಯು ಖಾಸಿಂ, ಕೆ. ವಾಲಿ, ಶಾಂತಕುಮಾರ್ ಗಜರೆ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು, ವಿಶೇಷ ಚೇತನರು ಹಾಗೂ ಅವರ ಪಾಲಕರು ಉಪಸ್ಥಿತರಿದ್ದರು.