ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಮೊಬೈಲ್ ಫೋನ್ ಪತ್ತೆ; ಪ್ರಕರಣ ದಾಖಲು
ಕಲಬುರಗಿ: ನಗರದ ಹೊರವಲಯದಲ್ಲಿರುವ ಕೇಂದ್ರ ಕಾರಾಗೃಹದಲ್ಲಿ ಮೊಬೈಲ್ ಫೋನ್ ಪತ್ತೆಯಾದ ಹಿನ್ನೆಲೆಯಲ್ಲಿ ಸಮೀಪದ ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬುಧವಾರ ಮಧ್ಯಾಹ್ನ ಕೇಂದ್ರ ಕಾರಾಗೃಹದ ವೀಕ್ಷಕ ರಾಚಯ್ಯ ಸ್ವಾಮಿ ಅವರು ಠಾಣೆಗೆ ಹಾಜರಾಗಿ, ಕೇಂದ್ರ ಕಾರಾಗೃಹದ ಸಹಾಯಕ ಅಧೀಕ್ಷಕ ಚನ್ನಪ್ಪ ಅವರ ಪರವಾಗಿ ದೂರು ಸಲ್ಲಿಸಿದ್ದಾರೆ.
ದೂರಿನ ಪ್ರಕಾರ, ಕೇಂದ್ರ ಕಾರಾಗೃಹದ ಸಹಾಯಕ ಅಧೀಕ್ಷಕ ಲೋಕೇಶ್ ಟಿ.ಕೆ. ಹಾಗೂ ಜೈಲರ್ ಕಾಂತಪ್ಪ ಪಾಟೀಲ ಅವರು ಸೆ.26ರಂದು ಕಾರಾಗೃಹದೊಳಗೆ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಬ್ಯಾರಕ್ ಸಂಖ್ಯೆ 14ರಲ್ಲಿದ್ದ ಶಿಕ್ಷಾಬಂದಿ ಸಂಖ್ಯೆ 1761ರ ನಾಗೇಂದ್ರ ಕೆ. ಅಲಿಯಾಸ್ ನಾಗೇಶ್ ಕಾಣಿಸದಿರುವುದು ಗಮನಕ್ಕೆ ಬಂದಿದೆ.
ಬಳಿಕ ಬ್ಯಾರಕ್‌ನ ಶೌಚಾಲಯದ ಬಳಿ ಪರಿಶೀಲನೆ ನಡೆಸಿದಾಗ, ನಾಗೇಂದ್ರ ತನ್ನ ಬಳಿ ಇದ್ದ ಮೊಬೈಲ್ ಫೋನ್ ಅನ್ನು ಶೌಚಾಲಯದ ಕಿಟಕಿಯಿಂದ ಹೊರಗೆ ಎಸೆದಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ನಂತರ ಹೊರ ಆವರಣದಲ್ಲಿ ತಪಾಸಣೆ ನಡೆಸಿದಾಗ ಬ್ಯಾರಕ್ ಸಂಖ್ಯೆ 14 ಮತ್ತು 16ರ ಮಧ್ಯಭಾಗದಲ್ಲಿ ಮೊಬೈಲ್ ಫೋನ್ ಹಾಗೂ ಸಿಮ್ ಕಾರ್ಡ್ ಪತ್ತೆಯಾಗಿದೆ ಎಂದು ತಿಳಿಸಲಾಗಿದೆ.
ಪತ್ತೆಯಾದ ವಸ್ತುಗಳಲ್ಲಿ ತಿಳಿ ನೀಲಿ ಬಣ್ಣದ ಮೊಟೊ ಕಂಪನಿಯ ಸ್ಮಾರ್ಟ್‌ಫೋನ್ ಹಾಗೂ ಏರ್‌ಟೆಲ್ ಸಿಮ್ ಕಾರ್ಡ್ ಸೇರಿವೆ. ಕಾರಾಗೃಹದಲ್ಲಿ ಮೊಬೈಲ್ ಫೋನ್ ಹಾಗೂ ಸಿಮ್ ಕಾರ್ಡ್ ನಿಷೇಧಿತ ವಸ್ತುಗಳಾಗಿರುವ ಹಿನ್ನೆಲೆಯಲ್ಲಿ ಅವುಗಳನ್ನು ವಶಕ್ಕೆ ಪಡೆಯಲಾಗಿದೆ.
ಈ ಸಂಬಂಧ ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.