Kalaburagi | ಆಯುರ್ವೇದ ವಿದ್ಯಾರ್ಥಿಗಳು ಜ್ಞಾನವನ್ನು ಸಮಾಜದ ಆರೋಗ್ಯ ಸೇವೆಗೆ ಸಮರ್ಪಿಸಬೇಕು : ಡಾ.ಅಲ್ಲಮಪ್ರಭು ಗುಡ್ಡ
ಆಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿ ಘಟಿಕೋತ್ಸವ
ಕಲಬುರಗಿ: ಆಯುರ್ವೇದ ವೈದ್ಯಕೀಯ ಶಿಕ್ಷಣ ಪಡೆದು ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳು ತಾವು ಗಳಿಸಿರುವ ಜ್ಞಾನ ಹಾಗೂ ಕೌಶಲವನ್ನು ಸಮಾಜದ ಆರೋಗ್ಯ ಸೇವೆಗೆ ಸಮರ್ಪಿಸಬೇಕು ಎಂದು ರಾಷ್ಟ್ರೀಯ ಭಾರತೀಯ ವೈದ್ಯಕೀಯ ವ್ಯವಸ್ಥೆ ಆಯೋಗದ ಅಧ್ಯಕ್ಷ ಡಾ. ಅಲ್ಲಮಪ್ರಭು ಗುಡ್ಡ ಹೇಳಿದರು.
ನಗರದ ಸೇಡಂ ರಸ್ತೆಯಲ್ಲಿರುವ ಎನ್‌ಐಎಸ್ ಕಟ್ಟಡದಲ್ಲಿ ಗುರುವಾರ ಶ್ರೀ ಹಿಂಗುಲಾಂಬಿಕಾ ಎಜುಕೇಶನ್ ಸೊಸೈಟಿಯ ಆಯುರ್ವೇದ ವೈದ್ಯಕೀಯ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ಆಯೋಜಿಸಿದ್ದ ‘ಘಟಿಕೋತ್ಸವ-2026’ರ ಪದವಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಆಯುರ್ವೇದವು ಭಾರತದ ಪ್ರಾಚೀನ ಹಾಗೂ ವೈಜ್ಞಾನಿಕ ವೈದ್ಯಕೀಯ ಪರಂಪರೆಯಾಗಿದ್ದು, ಇಂದಿನ ಆಧುನಿಕ ವೈದ್ಯಕೀಯ ವ್ಯವಸ್ಥೆಯೊಂದಿಗೆ ಸಮನ್ವಯ ಸಾಧಿಸುವ ಮೂಲಕ ಜನರಿಗೆ ಪರಿಣಾಮಕಾರಿ ಆರೋಗ್ಯ ಸೇವೆ ಒದಗಿಸುವ ಸಾಮರ್ಥ್ಯ ಹೊಂದಿದೆ. ವೈದ್ಯಕೀಯ ಕ್ಷೇತ್ರದಲ್ಲಿ ನಿರಂತರವಾಗಿ ಹೊಸ ಜ್ಞಾನವನ್ನು ಅರಿತುಕೊಳ್ಳುವ ಹಾಗೂ ಕಾಲಕ್ಕೆ ತಕ್ಕಂತೆ ತಮ್ಮ ಕೌಶಲವನ್ನು ಅಭಿವೃದ್ಧಿಪಡಿಸಿಕೊಳ್ಳುವ ಮನೋಭಾವವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವೈದ್ಯರಾಗುವುದು ಕೇವಲ ವೃತ್ತಿಯಲ್ಲ, ಅದು ಸಮಾಜದ ಆರೋಗ್ಯ ಮತ್ತು ಜನರ ಬದುಕಿನೊಂದಿಗೆ ನೇರವಾಗಿ ಸಂಬಂಧ ಹೊಂದಿರುವ ಮಹತ್ವದ ಜವಾಬ್ದಾರಿಯಾಗಿದೆ. ವಿಶೇಷವಾಗಿ ಗ್ರಾಮೀಣ ಹಾಗೂ ಹಿಂದುಳಿದ ಪ್ರದೇಶಗಳ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ತಲುಪಿಸುವಲ್ಲಿ ಯುವ ಆಯುರ್ವೇದ ವೈದ್ಯರು ಪ್ರಮುಖ ಪಾತ್ರ ವಹಿಸಬೇಕು ಎಂದು ಹೇಳಿದರು.
ರೋಗಿಗಳ ಬಗ್ಗೆ ಮಾನವೀಯ ಕಾಳಜಿ, ಸೇವಾ ಮನೋಭಾವ ಹಾಗೂ ವೃತ್ತಿಪರ ನೈತಿಕತೆಯನ್ನು ವೈದ್ಯರು ಸದಾ ಕಾಪಾಡಿಕೊಳ್ಳಬೇಕು. ವೈದ್ಯಕೀಯ ಜ್ಞಾನವನ್ನು ಸಮಾಜದ ಒಳಿತಿಗಾಗಿ ಬಳಸಿಕೊಂಡು ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಕೊಡುಗೆ ನೀಡಬೇಕು ಎಂದು ಡಾ. ಅಲ್ಲಮಪ್ರಭು ಗುಡ್ಡ ಕರೆ ನೀಡಿದರು.
ಸಮಾರಂಭದಲ್ಲಿ 2020ರ ಓಜಸ್ವಿ ಬ್ಯಾಚ್‌ನ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಬೆಂಗಳೂರಿನ ಉಪ ನೋಂದಣಾಧಿಕಾರಿ ಡಾ. ರೇವಣಸಿದ್ದಪ್ಪ ಪಾಟೀಲ ಹಾಗೂ ಕಲಬುರಗಿಯ ಇಎಸ್‌ಐ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಡೀನ್ ಡಾ. ಧನಾಜಿ ಎಸ್. ಜಾಧವ್ ಗೌರವ ಅತಿಥಿಗಳಾಗಿ ಭಾಗವಹಿಸಿದ್ದರು.
ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಕಾರ್ಯದರ್ಶಿ ನರೇಶ್ ಎಸ್. ತಾಂಡಳೆ ವಹಿಸಿದ್ದರು. ಕಾಲೇಜಿನ ಪ್ರಾಚಾರ್ಯೆ ಡಾ. ವಿಜಯಲಕ್ಷ್ಮಿ ಎನ್.ಎಚ್., ಕಾಲೇಜು ಆಡಳಿತಾಧಿಕಾರಿ ಸುನೀಲ್ ಜಿಂದೆ ಸೇರಿದಂತೆ ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ಪದವಿ ಪಡೆದ ವಿದ್ಯಾರ್ಥಿಗಳು ಹಾಗೂ ಪಾಲಕರು ಉಪಸ್ಥಿತರಿದ್ದರು.