ಕಲಬುರಗಿ | ರಸ್ತೆ ಕಾಮಗಾರಿಯಲ್ಲಿ ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಶ್ರವಣಕುಮಾರ ಆಗ್ರಹ
ಕಲಬುರಗಿ(ಯಡ್ರಾಮಿ): ರಸ್ತೆ ಡಾಂಬರೀಕರಣ ನಡೆಯುತ್ತಿರುವ ರಸ್ತೆಗೆ ಸೂಚನಾ ಫಲಕ ಅಳವಡಿಸದಿರುವ ಕಾರಣ ಯಡ್ರಾಮಿ ತಾಲೂಕಿನ ಇಜೇರಿ ಗ್ರಾಮದ ವಿದ್ಯಾರ್ಥಿನಿ ಮೇಲೆ ವಾಹನವೊಂದು ಹರಿದುಹೋಗಿದ್ದರಿಂದ ಬಾಲಕಿ ಕಾಲು ಕಳೆದುಕೊಂಡಿದ್ದಾಳೆ. ಮುಂಜಾಗೃತ ಕ್ರಮವನ್ನು ವಹಿಸದೇ ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಎಂದು ಗ್ರಾಮೀಣಾಭಿವೃದ್ಧಿ ಹೋರಾಟ ಸಮಿತಿ ಸಂಸ್ಥಾಪಕ ಅಧ್ಯಕ್ಷ ಶ್ರವಣಕುಮಾರ ನಾಯಕ ಆಗ್ರಹಿಸಿದ್ದಾರೆ.
ಯಡ್ರಾಮಿ-ಜೇವರ್ಗಿ ರಾಜ್ಯ ಹೆದ್ದಾರಿ ಬಂದ್ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶಾಲೆಯಲ್ಲಿ ಮೂಲ ಸೌಕರ್ಯವಿರದ ಕಾರಣ ವಿದ್ಯಾರ್ಥಿನಿಯು ನೀರು ಕುಡಿಯಲು ಹೊರಗಡೆ ಹೋಗಿದ್ದು, ಈ ವೇಳೆ ಅಪಘಾತ ಸಂಭವಿಸಿದೆ. ವಿದ್ಯಾರ್ಥಿನಿ ಬಡಕುಟುಂಬದಿಂದ ಬಂದಿದ್ದು, ಮಾನವೀಯತೆ ದೃಷ್ಟಿಯಿಂದ ಕುಟುಂಬದ ಒಬ್ಬರಿಗೆ ಸರ್ಕಾರಿ ನೌಕರಿ ನೀಡುವುದರ ಜತೆಗೆ ಎರಡು ಕೋಟಿ ರೂ. ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ರಸ್ತೆ ಕಾಮಗಾರಿ ಕುರಿತು ಸೂಚನಾ ಫಲಕ ಅಳವಡಿಸದೆ ನಿರ್ಲಕ್ಷ್ಯ ವಹಿಸಿದ ಲೋಕೋಪಯೋಗಿ ಇಲಾಖೆ ಅಧಿಕಾರಿ ಹಾಗೂ ಗುತ್ತಿಗೆದಾರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಮುಂಜಾಗೃತಾ ಕ್ರಮವಾಗಿ ಸೂಚನಾ ಫಲಕ, ಬ್ಯಾರಿಕೇಡ್, ರಾತ್ರಿಯ ಎಚ್ಚರಿಕೆ ದೀಪಗಳು ಹಾಕಿಲ್ಲ. ಇದರಿಂದ ಜನರು ಸಮಸ್ಯೆ ಅನುಭವಿಸುತ್ತಿದ್ದಾರೆ. ಸಾಕಷ್ಟು ಜನರು ವಾಹನಗಳಿಂದ ಬಿದ್ದು ಗಾಯ ಮಾಡಿಕೊಳ್ಳುತ್ತಿದ್ದಾರೆ ಎಂದು ದೂರಿದರು.
ಇದೇ ವೇಳೆಯಲ್ಲಿ ಬಿಇಒ ವೀರಣ್ಣ ಬೊಮ್ಮನಳ್ಳಿ ಅವರಿಗೆ ಮನವಿಪತ್ರ ಸಲ್ಲಿಸಿ, ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಡ ಹೇರಿದರು.
ಈ ಸಂದರ್ಭದಲ್ಲಿ ರೈತ ಹೋರಾಟಗಾರ ಅಲ್ಲಾಪಟೇಲ ಮಾಲಿಬಿರಾದಾರ, ಇಜೇರಿ ಗ್ರಾಮ ಘಟಕ ಅಧ್ಯಕ್ಷ ನಿಂಗಣ್ಣ ಚಿಗರಹಳ್ಳಿ, ಜೇವರ್ಗಿ ತಾಲೂಕು ಘಟಕ ಅಧ್ಯಕ್ಷ ಸಿದ್ದು ಹವಲ್ದಾರ, ಯಡ್ರಾಮಿ ತಾಲೂಕು ಘಟಕ ಅಧ್ಯಕ್ಷ ಪರಶುರಾಮ ಕೇದಾರ, ಭೀಮು ಖಾದ್ಯಾಪೂರ, ವೆಂಕಟೇಶ ಗುತ್ತೇದಾರ, ಸೈದಪ್ಪ ಹೊಸಮನಿ, ಯಲ್ಲಪ್ಪ ದೊರೆ, ರಮೇಶ ಮೇಲಗಿರಿ, ಪರಶುರಾಮ ಕಿಲೆದಮನಿ, ದೌಲತರಾಯ ನೀರಲಕೋಡ, ಹಣಮಂತ ತೆಗಿನಕೇರಿ, ಭೀಮು ಕಿಲೆದಮನಿ, ಮಲ್ಲಪ್ಪ ಪೂಜಾರಿ, ಗುಂಡೇಶ ಕೆ, ಮೊಹ್ಮದ್ ಸಿಪಾಯಿ, ಸುರೇಶ ಹಡಪದ, ನಿಂಗಪ್ಪ ಚಿಗರಹಳ್ಳಿ, ಈರಪ್ಪ ಕೋಳ್ಯಾಳ, ದೇವು ಮುತ್ತಕೋಡ, ಗೋಲು ಯಂಕಂಚಿ, ಇಲಿಯಾಸ್ ಪಟೇಲ, ಕಳೆಪ್ಪ ಭೋವಿ ಇತರರಿದ್ದರು.