ಕಲಬುರಗಿ | ಡಿ.20ರಂದು ಗುಲ್ಬರ್ಗಾ ವಿವಿಯಲ್ಲಿ ʼಶಾಂತರಸರ ಸಾಹಿತ್ಯ ಲೋಕʼ ಕಾರ್ಯಾಗಾರ
ಕಲಬುರಗಿ: ಗುಲ್ಬರ್ಗಾ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆ ಮತ್ತು ಬೆಂಗಳೂರಿನ ಡಾ.ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನದ ಸಂಯುಕ್ತಾಶ್ರಯದಲ್ಲಿ ಡಿ.20 ರಂದು ಶನಿವಾರ ಬೆಳಿಗ್ಗೆ 10 ಗಂಟೆಗೆ ಗುಲ್ಬರ್ಗಾ ವಿಶ್ವವಿದ್ಯಾಲಯದ ಹರಿಹರ ಸಭಾಂಗಣದಲ್ಲಿ "ಶಾಂತರಸರ ಸಾಹಿತ್ಯ ಲೋಕ" ಕುರಿತು ಒಂದು ದಿನದ ಸಾಹಿತ್ಯ ಕಾರ್ಯಾಗಾರ ಆಯೋಜಿಸಲಾಗಿದೆ.
ಹೊಸಪೇಟೆಯ ಕಥೆಗಾರ ಅಮರೇಶ ನುಗಡೋಣಿ ಕಾರ್ಯಾಗಾರ ಉದ್ಘಾಟಿಸಲಿದ್ದಾರೆ. ಡಾ. ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನದ ಅಧ್ಯಕ್ಷರಾಗಿರುವ ಹೆಚ್.ಆರ್. ಸುಜಾತಾ ಅಧ್ಯಕ್ಷತೆಯಲ್ಲಿ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಗುಲ್ಬರ್ಗಾ ವಿ.ವಿ. ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಎಚ್.ಟಿ. ಪೋತೆ, ಕಲಬುರಗಿಯ ರಂಗಕರ್ಮಿ ಎಚ್.ಎಸ್. ಬಸವಪ್ರಭು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಕಾರ್ಯಾಗಾರ ಅಂಗವಾಗಿ ಬೆಳಿಗ್ಗೆ 11.30 ರಿಂದ ಮಧ್ಯಾಹ್ನ 1.30 ಗಂಟೆವರೆಗೆ ನಡೆಯುವ ಮೊದಲನೇ ಗೋಷ್ಠಿಯಲ್ಲಿ "ಸಂಶೋಧನೆ ಮತ್ತು ಗ್ರಂಥ ಸಂಪಾದನೆ" ಕುರಿತು ಹೊಸಪೇಟೆಯ ಸಂಶೋಧಕ ಕೆ. ರವೀಂದ್ರನಾಥ, "ಗದ್ಯ ಸಾಹಿತ್ಯ" ಕುರಿತು ವಿಮರ್ಶಕ ಶ್ರೀಶೈಲ್ ನಾಗರಾಳ ಮಾತನಾಡುವರು. ಮಧ್ಯಾಹ್ನ 2 ರಿಂದ ಸಂಜೆ 5 ಗಂಟೆ ವರೆಗೆ ನಡೆಯುವ ಎರಡನೇ ಗೋಷ್ಠಿಯಲ್ಲಿ "ಸಾಹಿತ್ಯದಲ್ಲಿ ಸ್ತ್ರೀಲೋಕ" ಬಗ್ಗೆ ವಿಮರ್ಶಕಿ ಶೈಲಜಾ ಬಾಗೇವಾಡಿ, "ಕಾವ್ಯಲೋಕದ" ಕುರಿತು ರಾಯಚೂರಿನ ಕಥೆಗಾರ ಮಹಾಂತೇಶ ನವಲಕಲ್ ಹಾಗೂ "ಅನುವಾದ ಸಾಹಿತ್ಯ" ಕುರಿತು ಅನುವಾದಕ ಸೂರ್ಯಕಾಂತ ಸುಜ್ಯಾತ ಮಾತನಾಡುವರು.
ಸಂಜೆ 5 ಗಂಟೆಗೆ ಜರುಗುವ ಸಮಾರೋಪ ಸಮಾರಂಭದಲ್ಲಿ ಕವಿ ಮತ್ತು ಅನುವಾದಕ ಚಿದಾನಂದ ಸಾಲಿ ಉಪಸ್ಥಿತರಿರುವರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.