ಕಲಬುರಗಿ | ಪರಿಶಿಷ್ಟ ಜಾತಿ ಒಳಮೀಸಲಾತಿ ಸಮೀಕ್ಷೆ ತರಬೇತಿಗೆ ತಹಶೀಲ್ದಾರ್ ಚಾಲನೆ
ಕಲಬುರಗಿ: ಆಳಂದ ತಾಲೂಕಿನಲ್ಲಿ 2025ರ 26ನೇ ಸಾಲಿನ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಕುರಿತಾದ ಸಮೀಕ್ಷೆಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಅವರ ಏಕಸದಸ್ಯ ವಿಚಾರಣಾ ಆಯೋಗದ ನಿರ್ದೇಶನದಂತೆ ತಾಲೂಕಿನ ಗಣತಿ ಕಾರ್ಯದ ಸಿಬ್ಬಂದಿಗಳ ತರಬೇತಿಗೆ ತಾಲೂಕು ಆಡಳಿತದ ವತಿಯಿಂದ ತಹಶೀಲ್ದಾರ್ ಅಣ್ಣಾರಾವ್ ಪಾಟೀಲ್ ಅವರು ಚಾಲನೆ ನೀಡಿದರು.
“ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಸಮೀಕ್ಷೆಯು ಸಾಮಾಜಿಕ ನ್ಯಾಯವನ್ನು ಸ್ಥಾಪಿಸುವಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ. ಈ ಸಮೀಕ್ಷೆಯ ಯಶಸ್ಸು ತಾಲೂಕಿನ ಪ್ರತಿಯೊಂದು ಕುಟುಂಬದ ಭಾಗವಹಿಸುವಿಕೆಯ ಮೇಲೆ ಅವಲಂಬಿತವಾಗಿದೆ. ಶಿಕ್ಷಕರು ಮತ್ತು ಗಣಕರು ಈ ಕಾರ್ಯವನ್ನು ಸಮರ್ಪಣೆಯಿಂದ ಮತ್ತು ನಿಖರತೆಯಿಂದ ನಿರ್ವಹಿಸಬೇಕು ಎಂದು ಕರೆ ನೀಡಿ, ಮೊಬೈಲ್ ಆಪ್ ನ ಮೂಲಕ ದತ್ತಾಂಶ ಸಂಗ್ರಹಣೆ ನಡೆಯಲಿದ್ದು, ಶಿಕ್ಷಕರು ತಾಂತ್ರಿಕ ಕೌಶಲ್ಯವನ್ನು ರೂಢಿಸಿಕೊಳ್ಳಬೇಕು. ಈ ಸಮೀಕ್ಷೆ 101 ಪರಿಶಿಷ್ಟ ಜಾತಿಗಳ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳನ್ನು ದಾಖಲಿಸಬೇಕು ಎಂದು ಸಲಹೆ ನೀಡಿದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಾನಪ್ಪ ಕಟ್ಟಿಮನಿ, ಕ್ಷೇತ್ರ ಶಿಕ್ಷಣಾಧಿಕಾರಿ ಹೃಷಿಕೇಶ ದಂತಕಾಳೆ ಮಾತನಾಡಿದರು.
ಪ್ರೌಢಶಾಲೆಗಳ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಹಾಗೂ ಸಂಪನ್ಮೂಲ ವ್ಯಕ್ತಿ ಮರೆಪ್ಪ ಬಡಿಗೇರ, ಶಿಕ್ಷಣ ಇಲಾಖೆಯ ಅಣ್ಣಪ್ಪ ಹಾದಿಮನಿ, ಮುಖ್ಯ ಶಿಕ್ಷಕ ವಿನೋದ್ ಕುಲಕರ್ಣಿ, ಕಿಣ್ಣಿಸುಲ್ತಾನ ಶಾಲೆಯ ಮುಖ್ಯ ಶಿಕ್ಷಕ ನಬಿ ಸರ್ ಮತ್ತು ಶಿಕ್ಷಕ ಕಲ್ಯಾಣಪ್ಪ ಬಿಜ್ಜರಗಿ ಉಪಸ್ಥಿತರಿದ್ದರು.