ಕಲಬುರಗಿ | ಸೆ.6ರಂದು ತಾಲೂಕು 9ನೇ ಕನ್ನಡ ಸಾಹಿತ್ಯ ಸಮ್ಮೇಳನ
ಕಲಬುರಗಿ: ಕಾಯಕ ಮತ್ತು ದಾಸೋಹ ಪರಂಪರೆಯ ನೆಲವಾದ ಕಲಬುರಗಿ ನಗರದ ಕನ್ನಡ ಭವನದಲ್ಲಿ ಸೆ.6ರಂದು ತಾಲೂಕು ಕನ್ನಡ ಸಾಹಿತ್ಯ ಪರಿಷತು ಏರ್ಪಡಿಸಿರುವ ಕಲಬುರಗಿ ತಾಲೂಕು 9 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಿದ್ಧತೆ ಪೂರ್ಣಗೊಂಡಿದ್ದು, ಅರ್ಥಪೂರ್ಣವಾಗಿ ಸಮ್ಮೇಳನ ನಡೆಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಕಸಾಪ ತಾಲೂಕಾಧ್ಯಕ್ಷೆ ಶಿವಲೀಲಾ ಎಸ್ ಕಲಗುರ್ಕಿ ತಿಳಿಸಿದ್ದಾರೆ.
ಇಲ್ಲಿನ ಹಿರಿಯ ಸಾಹಿತಿಗಳಾದ ಡಾ. ಶ್ರೀಶೈಲ ನಾಗರಾಳ ಅವರ ಸರ್ವಾಧ್ಯಕ್ಷತೆಯಲ್ಲಿ ಲಿಂ.ಗುರುಬಸಪ್ಪ ಸಜ್ಜನಶೆಟ್ಟಿ ವೇದಿಕೆಯಡಿಯಲ್ಲಿ ನಡೆಯಲಿರುವ ಒಂದು ದಿನದ ಸಾಹಿತ್ಯ ಸಮ್ಮೇಳನದ ಅಂದು ಬೆಳಗ್ಗೆ 9.30 ಕ್ಕೆ ನಡೆಯುವ ಸಾಂಸ್ಕೃತಿಕ ಮೆರವಣಿಗೆಗೆ ಮೇಯರ್ ವರ್ಷಾ ಜಾನೆ ಹಾಗೂ ಉಪ ಮೇಯರ್ ತೃಪ್ತಿ ಲಾಖೆ ಅವರು ಚಾಲನೆ ನೀಡಲಿದ್ದಾರೆ.
ಬೆಳಗ್ಗೆ 10.45 ಕ್ಕೆ ನಡೆಯುವ ಉದ್ಘಾಟನಾ ಸಮಾರಂಭಕ್ಕೆ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ.ಚನ್ನಪ್ಪ ಕಟ್ಟಿ ಉದ್ಘಾಟಕರಾಗಿ ಆಗಮಿಸಲಿದ್ದು, ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ನೇತೃತ್ವ ವಹಿಸಲಿದ್ದಾರೆ. ಹಿರಿಯ ಚಿಂತಕ ಡಾ.ಹೆಚ್.ಟಿ. ಪೋತೆ ಅವರು ಜಾನಪದ ಸಮಾಜೋ ಸಂಸ್ಕೃತಿ ಕೃತಿ ಜನಾರ್ಪಣೆಗೊಳಿಸಲಿದ್ದು, ಕ್ರೆಡಲ್ ನ ಮಾಜಿ ಅಧ್ಯಕ್ಷ ಚಂದು ಬಿ.ಜಿ. ಪಾಟೀಲ, ಲಕ್ಷ್ಮೀ ದತ್ತಾತ್ರೇಯ ಪಾಟೀಲ ರೇವೂರ, ಶಾಸಕರಾದ ಅಲ್ಲಮಪ್ರಭು ಪಾಟೀಲ, ಬಸವರಾಜ ಮತ್ತಿಮಡು, ಖನೀಜ್ ಫಾತೀಮಾ, ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷೆ ಸಾಹಿತಿ ಪ್ರಮೀಳಾ ಜಾನಪ್ಪಗೌಡ ಚಿಂಚೋಳಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ನಂತರ ಮಧ್ಯಾಹ್ನ 12.45 ಕ್ಕೆ ಹಿರಿಯ ಸಾಹಿತಿ ಡಾ.ಸ್ವಾಮಿರಾವ ಕುಲಕರ್ಣಿ ಅಧ್ಯಕ್ಷತೆಯಲ್ಲಿ ನಡೆಯುವ ಸಾಹಿತ್ಯ ಸಿಂಚನ ಗೋಷ್ಠಿಯಲ್ಲಿ ವಿಮರ್ಶಾ ನೋಟಗಳು-ಸಾಹಿತ್ಯದ ಮೌಲ್ಯಗಳು ಕುರಿತು ಡಾ.ಜಗನ್ನಾಥ ತರನಳ್ಳಿ, ಆಧುನಿಕ ಸಾಹಿತ್ಯಕ್ಕಿರುವ ಸವಾಲುಗಳು-ಪರಿಹಾರೋಪಾಯಗಳು ಕುರಿತು ಡಾ.ಅಪ್ಪಗೆರೆ ಸೋಮಶೇಖರ, ಸಮ್ಮೇಳನಾಧ್ಯಕ್ಷರ ಬದುಕು-ಬರಹದ ಕುರಿತು ಡಾ.ಸಂತೋಷಕುಮಾರ ಕಂಬಾರ ಅವರು ಮಾತನಾಡಲಿದ್ದಾರೆ. ಸಾಹಿತಿ ಧರ್ಮಣ್ಣ ಎಚ್.ಧನ್ನಿ ಆಶಯ ನುಡಿಗಳನ್ನಾಡಲಿದ್ದಾರೆ.
ಮಧ್ಯಾಹ್ನ 2.45 ಕ್ಕೆ ನಡೆಯುವ ಕಾವ್ಯ ಕಿರಣ ಎಂಬ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಹಿರಿಯ ಲೇಖಕಿ ಡಾ.ಜಯದೇವಿ ಗಾಯಕವಾಡ ಅಧ್ಯಕ್ಷತೆ ವಹಿಸಲಿದ್ದಾರೆ. ಯಾದಗಿರಿ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸಿ.ಎಸ್.ಮುಧೋಳ ಆಶಯ ನುಡಿಗಳನ್ನಾಡಲಿದ್ದು, ಸುಮಾರು 20ಕ್ಕೂ ಹೆಚ್ಚು ಕವಿಗಳು ಕವನ ವಾಚಿಸಲಿದ್ದಾರೆ ಎಂದು ವಿವರಿಸಿದರು.
ಇಳಿಹೊತ್ತು 4.45 ಕ್ಕೆ ಸಮಾರೋಪ ಹಾಗೂ ಸತ್ಕಾರ ಸಂಭ್ರಮ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸಾಹಿತಿ-ಪತ್ರಕರ್ತ ಡಾ. ಶಿವರಂಜನ್ ಸತ್ಯಂಪೇಟೆ ಸಮಾರೋಪ ನುಡಿಗಳನ್ನಾಡಲಿದ್ದು, ಕಲಬುರಗಿ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸೂರ್ಯಕಾಂತ ಮದಾನೆ ವಿಶೇಷ ಅತಿಥಿಗಳಾಗಿ ಆಗಮಿಸಲಿದ್ದಾರೆ. ಈ ವೇಳೆ ತಾಲೂಕಿನ ವಿವಿಧ ಕ್ಷೇತ್ರದ ಸಾಧಕರಿಗೆ ಸತ್ಕರಿಸಲಾಗುವುದು.
ಸ್ವಾಗತ ಸಮಿತಿಯ ಅಧ್ಯಕ್ಷ ದಯಾನಂದ ದೇವರಮನಿ, ಕಾರ್ಯಾಧ್ಯಕ್ಷ ವಿಶ್ವನಾಥ ಹುಲಿ, ಗೌರವಾಧ್ಯಕ್ಷ ಫಾರೂಕ್ ಅಹ್ಮದ ಮಣೂರ ಅವರು ಹಾಗೂ ಪರಿಷತ್ತಿನ ಪದಾಧಿಕಾರಿಗಳು ಸಮ್ಮೇಳನದಲ್ಲಿ ಹಾಜರಿರಲಿದ್ದಾರೆ ಎಂದರು.