×
Ad

ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿಗೆ ಕಲಬುರಗಿಯ ಶಿಕ್ಷಕಿ ಡಾ.ಶ್ರೀದೇವಿ ಕಲ್ಯಾಣ್ ಆಯ್ಕೆ

Update: 2025-08-26 17:06 IST

ಕಲಬುರಗಿ: ಕೇಂದ್ರ ಸರ್ಕಾರದ ಶಿಕ್ಷಣ ಸಚಿವಾಲಯದ, ಉನ್ನತ ಶಿಕ್ಷಣ ಇಲಾಖೆಯು ನೀಡುವ 2025ರ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿಗೆ ಇಲ್ಲಿನ ಶರಣಬಸವ ವಿಶ್ವವಿದ್ಯಾಲಯದ ಡಾ.ಶ್ರೀದೇವಿ ಕಲ್ಯಾಣ್ ಆಯ್ಕೆಯಾಗಿದ್ದಾರೆ.

50,000 ರೂ. ನಗದು ಮತ್ತು ಬೆಳ್ಳಿ ಪದಕವನ್ನು ಹೊಂದಿರುವ ಪ್ರಶಸ್ತಿಯನ್ನು ಪಡೆಯಲು ಆಯ್ಕೆಯಾದ ಕರ್ನಾಟಕದ ಮೂವರು ಶಿಕ್ಷಕರಲ್ಲಿ ಡಾ.ಶ್ರೀದೇವಿ ಕಲ್ಯಾಣ್ ಕೂಡ ಒಬ್ಬರಾಗಿದ್ದಾರೆ. ಈ ವರ್ಷ ಸೆ.5 ರಂದು ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಅವರಿಗೆ ನೀಡಲಾಗುವುದು. ಪ್ರಶಸ್ತಿಯನ್ನು ಸ್ವೀಕರಿಸಲು ಆಯ್ಕೆಯಾದ ಕರ್ನಾಟಕದ ಇತರ ಇಬ್ಬರು ಶಿಕ್ಷಕರಿಗೆ ಉಡುಪಿಯ ಮಣಿಪಾಲ ತಂತ್ರಜ್ಞಾನ ಸಂಸ್ಥೆಯ ಡಾ.ಶೋಭಾ ಎಂ.ಇ. ಮತ್ತು ಬೆಂಗಳೂರಿನ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್‍ನ ಪ್ರೊ.ಶ್ರೀವರ್ಧಿನಿ ಕೇಶವಮೂರ್ತಿ ಝಾ ಸೇರಿದ್ದಾರೆ ಎಂದು ಆದೇಶ ಪತ್ರದಲ್ಲಿ ಇಲಾಖೆ ತಿಳಿಸಿದೆ.

ಡಾ.ಶ್ರೀದೇವಿ ಕಲ್ಯಾಣ್ ಅವರು ಪ್ರಸ್ತುತ ಶರಣಬಸವ ವಿಶ್ವವಿದ್ಯಾಲಯದ ವಿಜ್ಞಾನ ಮತ್ತು ತಂತ್ರಜ್ಞಾನ ನಿಕಾಯದಲ್ಲಿ ಗಣಿತಶಾಸ್ತ್ರದ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ವಿಶ್ವವಿದ್ಯಾಲಯದ ಹಿರಿಯ ಅಧ್ಯಾಪಕರಲ್ಲಿ ಒಬ್ಬರಾದ ಡಾ. ಶ್ರದೇವಿ ಕಲ್ಯಾಣ್ ಅವರು, ಇದುವರೆಗೆ ಪ್ರತಿಷ್ಠಿತ ನಿಯತಕಾಲಿಕೆಗಳಲ್ಲಿ 40 ಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ ಮತ್ತು ಮೂರು ಪುಸ್ತಕಗಳನ್ನು ಪ್ರಕಟಿಸಿದ್ದಾರೆ.

ಪ್ರಶಸ್ತಿ ಪಡೆದಿದ್ದಕ್ಕಾಗಿ ಮಾತೋಶ್ರೀ ಡಾ.ದಾಕ್ಷಾಯಿಣಿ ಅವ್ವಾಜಿ, ಬಸವರಾಜ ದೇಶಮುಖ, ವಿವಿಯ ಉಪಕುಲಪತಿ ಪ್ರೊ.ಅನಿಲಕುಮಾರ ಬಿಡವೆ, ಕುಲಸಚಿವ ಡಾ.ಎಸ್.ಜಿ.ಡೊಳ್ಳೇಗೌಡರ್, ಡೀನ್ ಡಾ.ಲಕ್ಷ್ಮಿ ಪಾಟೀಲ್ ಮಾಕಾ, ಕುಲಸಚಿವ(ಮೌಲ್ಯಮಾಪನ) ಡಾ.ಎಸ್.ಎಚ್.ಹೊನ್ನಳ್ಳಿ ಮತ್ತಿತರರು ಡಾ. ಶ್ರೀದೇವಿ ಕಲ್ಯಾಣ್ ಅವರನ್ನು ಅಭಿನಂದಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News