ಕಲಬುರಗಿ | ತಾಂತ್ರಿಕ ದೋಷ; ಲಿಫ್ಟ್‌ನಲ್ಲಿ ಸಿಲುಕಿದ 9 ಮಂದಿಯ ರಕ್ಷಣೆ
Update: 2025-05-13 14:20 IST
ಕಲಬುರಗಿ : ನಗರದ ಜಿಮ್ಸ್ (JIMS) ಆಸ್ಪತ್ರೆಯ ಮೂರನೇ ಮಹಡಿಯಲ್ಲಿ ಹಠಾತ್ ಆಗಿ ಲಿಫ್ಟ್ ನಿಂತು, ಒಟ್ಟು 9 ಜನರು ಒಂದುವರೆ ಗಂಟೆ ಕಾಲ ಲಿಫ್ಟ್ ಒಳಗೆ ಸಿಲುಕಿದ ಘಟನೆ ಬೆಳಕಿಗೆ ಬಂದಿದೆ.
ವಿದ್ಯುತ್ ಪೂರೈಕೆ ಬಂದ್ ಆಗಿ, ಲಿಫ್ಟ್ ನಲ್ಲಿ ಫ್ಯಾನ್ ಕೂಡ ನಿಂತ ಪರಿಣಾಮ ಲಿಫ್ಟ್ ನಲ್ಲಿ ಸಿಲುಕಿದವರಿಗೆ ಉಸಿರಾಟದ ತೊಂದರೆ ಉಂಟಾಗಿದೆ. ಅದೃಷ್ಟವಶಾತ್ ಯಾರಿಗೂ ಗಂಭೀರ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ.
ಗೋಡೆ ಒಡೆದು ಜನರ ರಕ್ಷಣೆ :
ಆಸ್ಪತ್ರೆಯ ಸಿಬ್ಬಂದಿ ಡ್ರಿಲ್ ಯಂತ್ರದ ಸಹಾಯದಿಂದ ತಡೆಗೋಡೆ ಒಡೆದು ಲಿಫ್ಟ್ ನಲ್ಲಿ ಸಿಲುಕಿದವರನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ.
ಜಿಮ್ಸ್ ಮೆಡಿಕಲ್ ಸುಪರಿಂಟೆಂಡೆಂಟ್ ಡಾ. ಶಿವಕುಮಾರ್ ಮಾತನಾಡಿ, "ಘಟನೆಗೆ ಕಾರಣವಾದ ತಾಂತ್ರಿಕ ವೈಫಲ್ಯ ಕುರಿತು ತನಿಖೆ ನಡೆಯುತ್ತಿದೆ. ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುತ್ತದೆ" ಎಂದಿದ್ದಾರೆ.