×
Ad

ಕಲಬುರಗಿ | ಎಸೆಸೆಲ್ಸಿ ಫಲಿತಾಂಶ ಹೆಚ್ಚಿಸಲು ಮುಖ್ಯ ಶಿಕ್ಷಕರ ಪಾತ್ರ ಮುಖ್ಯ : ಬಿಇಓ ಶಶಿಧರ್‌

Update: 2025-11-23 20:22 IST

ಕಲಬುರಗಿ: ಒಂದು ಶಾಲೆಯ ನಾಯಕನೆಂದರೆ ಮುಖ್ಯ ಶಿಕ್ಷಕ. ಅವರು ತಮ್ಮ ಜವಾಬ್ದಾರಿ ಅರಿತು ಸರಿಯಾಗಿ ಕಾರ್ಯನಿರ್ವಹಿಸಿದರೆ ಆ ಶಾಲೆಯ ಫಲಿತಾಂಶ ನೂರಕ್ಕೆ ನೂರರಷ್ಟು ಬರಲಿದೆ ಎಂದು ಚಿತ್ತಾಪೂರ ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್‌ ಬಿರಾದಾರ ಹೇಳಿದರು.

ಮಾಡಬೂಳ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಅಜೀಂ ಪ್ರೇಮಜಿ ಪೌಂಡೇಶನ ವತಿಯಿಂದ ಎಸೆಸೆಲ್ಸಿ ಫಲಿತಾಂಶ ಸುಧಾರಣೆಗಾಗಿ ಆಯೋಜಿಸಲಾದ ಮುಖ್ಯ ಶಿಕ್ಷಕರ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಚಿತ್ತಾಪುರ ತಾಲೂಕಿನ ಫಲಿತಾಂಶ ಹೆಚ್ಚಳವಾಗಬೇಕಾದರೆ ಆ ತಾಲೂಕಿನಲ್ಲಿರುವ ಎಲ್ಲಾ ಶಾಲೆಯ ಶಿಕ್ಷಕರು ಪ್ರಾಮಾಣಿಕವಾಗಿ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಕೆಲಸ ಮಾಡಬೇಕಿದೆ. ಅವರು ಸರಿಯಾಗಿ ಕಾರ್ಯನಿರ್ವಹಿಸಬೇಕಾದರೆ ಅಲ್ಲಿನ ಮುಖ್ಯಶಿಕ್ಷಕರು ತಮ್ಮ ಶಾಲೆಯ ಸಹಶಿಕ್ಷಕರಿಗೆ ಸರಿಯಾಗಿ ನಿರ್ದೇಶನ ನೀಡಬೇಕಾಗುತ್ತದೆ. ಈ ಬಾರಿ ಪ್ರತಿಯೊಂದು ಶಾಲೆಯ ಫಲಿತಾಂಶ ನೂರಕ್ಕೆ ನೂರರಷ್ಟು ಬರಬೇಕು. ಅದಕ್ಕಾಗಿ ಸಾಕಷ್ಟು ಶ್ರಮ ಈ ಮೂರು ತಿಂಗಳಲ್ಲಿ ಆಗಬೇಕಿದೆ ಎಂದು ಹೇಳಿದರು. 

ಈ ವೇಳೆ ಅಜೀಂ ಪ್ರೇಮಜಿ ಪೌಂಡೇಶನ್‌ನ ಸಂಪನ್ಮೂಲ ವ್ಯಕ್ತಿಗಳು ವಿಷಯವಾರು ಯಾವ ರೀತಿ ಕಾರ್ಯನಿರ್ವಹಿಸಿದರೆ ಫಲಿತಾಂಶ ಉತ್ತಮಪಡಿಸಬಹುದು ಎಂಬ ಬಗ್ಗೆ ಕಾರ್ಯಾಗಾರವನ್ನು ನಡೆಸಿಕೊಟ್ಟರು.

ಅಜೀಂ ಪ್ರೇಮಜಿ ಪೌಂಡೇಶನ್‌ ಸಂಯೋಜಕಿ ಅನನ್ಯ, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಶಿವಶರಣಪ್ಪ ಮಂಠಾಳೆ, ಕ್ಷೇತ್ರ ಸಮನ್ವಯಾಧಿಕಾರಿ ಮಲ್ಲಿಕಾರ್ಜುನ ಸೇಡಂ, ಕರ್ನಾಟಕ ಪಬ್ಲಿಕ್ ಶಾಲೆಯ ಮುಖ್ಯ ಶಿಕ್ಷಕಿ ಸಿದ್ದಮ್ಮ, ತಾಲೂಕು ಮುಖ್ಯಗುರುಗಳ ಸಂಘದ ಕಾರ್ಯದರ್ಶಿ ರಮೇಶ್‌ ಬಟಗೇರಿ, ಇಸಿಓ ರವೀಂದ್ರ , ಅಬ್ಬಿಗೇರಿ ಶರಣಪ್ಪ ಹಾಗೂ ತಾಲೂಕಿನ ಎಲ್ಲಾ ಶಾಲೆಯ ಮುಖ್ಯ ಶಿಕ್ಷಕರು ಉಪಸ್ಥಿತರಿದ್ದರು.  

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News