×
Ad

ಕಲಬುರಗಿ | ಗೋದುತಾಯಿ ಕಾಲೇಜಿನಲ್ಲಿ ‘ಯುವ ಪ್ರತಿಭಾ ಸಂಭ್ರಮ’ಕ್ಕೆ ಚಾಲನೆ

ಸೃಜನಾತ್ಮಕ ಚಿಂತನೆ, ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳಿ : ಬಸವರಾಜ ದೇಶಮುಖ್‌

Update: 2025-11-12 12:53 IST

ಕಲಬುರಗಿ: ವಿದ್ಯಾರ್ಥಿಗಳು ಸೃಜನಾತ್ಮಕ ಚಿಂತನೆ, ಸ್ಪರ್ಧಾತ್ಮಕ ಮನೋಭಾವನೆ ಬೆಳೆಸಿಕೊಳ್ಳುಬೇಕೆಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ್‌ ಹೇಳಿದರು.

ಇಲ್ಲಿನ ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಮಹಿಳಾ ಮಹಾವಿದ್ಯಾಲಯ ಮತ್ತು ಗೋದುತಾಯಿ ಶಿಕ್ಷಣ(ಬಿ.ಎಡ್) ಮಹಾವಿದ್ಯಾಲಯಗಳ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಲಿಂ. ಡಾ.ಶರಣಬಸವಪ್ಪ ಅಪ್ಪ, ಡಾ.ದಾಕ್ಷಾಯಿಣಿ ಎಸ್.ಅಪ್ಪ ಮತ್ತು ಚಿ.ದೊಡ್ಡಪ್ಪ ಅಪ್ಪ ಅವರ ಜನ್ಮದಿನದ ಪ್ರಯುಕ್ತ ಮೂರು ದಿನಗಳ ಅಂತರ್ ಮಹಾವಿದ್ಯಾಲಯಗಳ ವಿವಿಧ ಸ್ಪರ್ಧೆಗಳ ಯುವ ಪ್ರತಿಭಾ ಸಂಭ್ರಮ-2025 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಡಾ.ಶರಣಬಸವಪ್ಪ ಅಪ್ಪ ಅವರು ಈ ಭಾಗವನ್ನು ಶೈಕ್ಷಣಿಕವಾಗಿ ಸಮೃದ್ಧವಾಗಿ ಬೆಳೆಸಿದರು. ಅದರಂತೆ ಡಾ.ಅವ್ವಾಜಿಯವರು ವಿದ್ಯಾರ್ಥಿಗಳ ಏಳಿಗೆಗಾಗಿ ಹಗಲಿರುಳು ಚಿಂತಿಸುತ್ತಿದ್ದಾರೆ. ಸ್ಪರ್ಧೆಗಳು ಎಂದರೆ ಕೇವಲ ಸೋಲು-ಗೆಲುವಿನ ವೇದಿಕೆ ಅಲ್ಲ, ವ್ಯಕ್ತಿಯ ಅಂತರಂಗದ ಪ್ರತಿಭೆ, ಶ್ರಮ, ಶಿಸ್ತು ಮತ್ತು ಸಾಮರ್ಥ್ಯ ವ್ಯಕ್ತಪಡಿಸುವುದಾಗಿದೆ ಎಂದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾದ ಮಹಾನಗರ ಪಾಲಿಕೆಯ ಮಹಾಪೌರರಾದ ವರ್ಷಾ ರಾಜೀವ ಜಾನೆ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗವು ಶೈಕ್ಷಣಿಕವಾಗಿ ಬೆಳೆಯಲು ಶರಣಬಸವೇಶ್ವರ ಸಂಸ್ಥೆಯ ಕೊಡುಗೆ ಅಪಾರವಾಗಿದೆ. ಈ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ವಿಶ್ವದಾದ್ಯಂತ ಬೆಳಗುತ್ತಿದ್ದಾರೆ ಎಂದರು.

ಕಾರ್ಯಕ್ರಮದ ಇನ್ನೋರ್ವ ಅತಿಥಿಯಾದ ಶರಣಬಸವೇಶ್ವರ ಸಂಸ್ಥೆಯ ಆಡಳಿತಾಧಿಕಾರಿ ಡಾ.ಅಲ್ಲಮಪ್ರಭು ದೇಶಮುಖ್‌ ಮಾತನಾಡಿ, ಕಲೆ, ಕ್ರೀಡೆ, ವಿಜ್ಞಾನ, ಸಾಹಿತ್ಯ, ತಂತ್ರಜ್ಞಾನ ಎಲ್ಲಾ ಕ್ಷೇತ್ರಗಳಲ್ಲಿ ತಮ್ಮ ಪ್ರತಿಭೆಯನ್ನು ತೋರಲು ಸೂಕ್ತ ವೇದಿಕೆಯಾಗಿದೆ. ಸ್ಪರ್ಧೆಯಲ್ಲಿ ಗೆಲುವಿಗಿಂತ ಭಾಗವಹಿಸುವ ಮನೋಭಾವ ಮುಖ್ಯವಾಗಿದೆ. ವಿದ್ಯಾರ್ಥಿಗಳು ಪರಿಶ್ರಮ ಪಡಬೇಕು. ಅಂದಾಗ ಮಾತ್ರ ಸಾಧನೆ ಸಾಧ್ಯವಿದೆ. ಡಾ.ಅಪ್ಪಾ ಅವರು ವಿದ್ಯಾರ್ಥಿಗಳ ಬೆಳವಣಿಗೆಗೆ ನಿರಂತರವಾಗಿ ಯೋಚಿಸುತ್ತಿದ್ದರು ಎಂದರು.

ಕಾರ್ಯಕ್ರಮದ ಗೌರವ ಅತಿಥಿ ಶರಣಬಸವೇಶ್ವರ ದೇವಸ್ಥಾನ ಆವರಣದ ಶಾಲಾ-ಕಾಲೇಜುಗಳ ನಿರ್ದೇಶಕಿ ಡಾ.ನೀಲಾಂಬಿಕಾ ಶೇರಿಕಾರ, ಗೋದುತಾಯಿ ದೊಡ್ಡಪ್ಪ ಅಪ್ಪ ಪದವಿ ಮಹಿಳಾ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಪುಟ್ಟಮಣಿ ದೇವಿದಾಸ ಪ್ರಾಸ್ತಾವಿಕ ಮಾತನಾಡಿದರು.

ಗೋದುತಾಯಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಕಲ್ಪನಾ ಭೀಮಳ್ಳಿ ಸ್ವಾಗತಿಸಿದರು. ಅರ್ಥಶಾಸ್ತ್ರ ಪ್ರಾಧ್ಯಾಪಕಿ ನಿರ್ಮಲಾ ದೇವಾಡಿಗ ಬರೆದ ಪುಸ್ತಕವನ್ನು ಉದ್ಘಾಟಿಸಲಾಯಿತು. ವೇದಿಕೆ ಮೇಲೆ ಹಿರಿಯ ಪ್ರಾಧ್ಯಾಪಕಿ ಡಾ.ಸೀಮಾ ಪಾಟೀಲ ಇದ್ದರು. ಪ್ರಾಧ್ಯಾಪಕಿ ಸುಪ್ರಿಯಾ ನಾಗಶೆಟ್ಟಿ ನಿರೂಪಿಸಿದರೆ, ಶಕುಂತಲಾ ಖಜೂರಿ ವಂದಿಸಿದರು. ನಂತರ ವಿವಿಧ ಮಹಾವಿದ್ಯಾಲಯದಿಂದ ಬಂದ ವಿದ್ಯಾರ್ಥಿಗಳಿಗೆ ಭಾಷಣ, ಪ್ರಬಂಧ ಸ್ಪರ್ಧೆಗಳು ನಡೆದವು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News