ಕಲಬುರಗಿ| ಗಡಿಕೇಶ್ವಾರ ಆರೋಗ್ಯ ಕೇಂದ್ರದ 'ಡಿ' ಗ್ರೇಡ್ ಆದೇಶ ಹಿಂಪಡೆಯುವಂತೆ ಆಗ್ರಹ
ಕಲಬುರಗಿ: ಚಿಂಚೋಳಿ ತಾಲೂಕಿನ ಗಡಿಕೇಶ್ವಾರ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರವು ಪ್ರಾಥಮಿಕ ಆರೋಗ್ಯ ಕೇಂದ್ರವಾಗಿ 'ಡಿ' ಗ್ರೇಡ್ ಮಾಡಿರುವ ಆದೇಶವನ್ನು ಹಿಂಪಡೆಯಬೇಕು ಎಂದು ಗಡಿಕೇಶ್ವಾರ ಸಮುದಾಯ ಆರೋಗ್ಯ ಕೇಂದ್ರ ಹೋರಾಟ ಸಮಿತಿಯಿಂದ ಹೋಡೆಬೀನಳ್ಳಿ ಕ್ರಾಸ್ ಹತ್ತಿರ ಬೃಹತ್ ಪ್ರತಿಭಟನೆ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಗಡಿಕೇಶ್ವಾರ ಗ್ರಾಮದಲ್ಲಿ ಸುಮಾರು 30 ವರ್ಷಗಳಿಂದ ಸಮುದಾಯ ಆರೋಗ್ಯ ಕೇಂದ್ರವು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದೆ. ಈ ಸಮುದಾಯ ಆರೋಗ್ಯ ವ್ಯಾಪ್ತಿಯಲ್ಲಿ ಗಡಿಕೇಶ್ವಾರ, ರಾಯಕೋಡ, ಭೂತಪುರ, ಚಿಂತಪಳ್ಳಿ, ರುದನೂರ, ಚಿಂತಪಳ್ಳಿ ತಾಂಡಾ, ಕೆರೋಳ್ಳಿ, ಬೆನಕನಹಳ್ಳಿ ಭಂಟನಹಳ್ಳಿ, ತೇಗಲತಿಪ್ಪಿ, ಹಲಚೇರಾ ಹಾಗೂ ಇನ್ನೂ ಅನೇಕ ಗ್ರಾಮಗಳು ಬರುತ್ತವೆ. ಈ ಆಸ್ಪತ್ರೆ ಸುಮಾರು 30 ವರ್ಷಗಳಿಂದ ಬಡ ಮಧ್ಯಮ, ನಿರ್ಗತಿಕ, ವೃದ್ಧರು ಮತ್ತು ಗರ್ಭಿಣಿಯರಿಗೆ ಉತ್ತಮ ಸೇವೆ ನೀಡುತ್ತಾ ಬಂದಿದೆ. ಪ್ರತಿದಿನ ಸುಮಾರು 200ಕ್ಕೂ ಹೆಚ್ಚು ರೋಗಿಗಳು ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿ ಮಕ್ಕಳ ತಜ್ಞರು, ದಂತ ವೈದ್ಯರು ಶ್ರೀರೋಗ ತಜ್ಞರು ಸೇರಿದಂತೆ ಹಲವು ಸಿಬ್ಬಂದಿಗಳು ಪ್ರತಿನಿತ್ಯ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಹೇಳಿದರು.
ಸರಕಾರ ಹೊರಡಿಸಿದ 'ಡಿ' ಗ್ರೇಡ್ ಆದೇಶದಿಂದ ಇಲ್ಲಿನ ಹಲವು ವೈದ್ಯ ಹುದ್ದೆಗಳು ರದ್ದಾಗುತ್ತವೆ. ಹಲವು ಸೌಲಭ್ಯಗಳಿಂದ ಆರೋಗ್ಯಕೇಂದ್ರವು ವಂಚಿತವಾಗುತ್ತದೆ. ಈ ಸಮುದಾಯ ಆರೋಗ್ಯ ಕೇಂದ್ರ ಹೊರತುಪಡಿಸಿದರೆ 25 ಕಿ.ಮೀ ವ್ಯಾಪ್ತಿಯಲ್ಲಿ ಯಾವುದೇ ಸಮುದಾಯ ಆರೋಗ್ಯ ಕೇಂದ್ರ ಲಭ್ಯವಿಲ್ಲ. ಇದರಿಂದ ಬಡ, ಮಧ್ಯಮ, ದುರ್ಬಲ ವರ್ಗದ ಜನರಿಗೆ ಮಹಿಳೆಯರಿಗೆ, ಬಾಣಂತಿಯರಿಗೆ ಸಾಕಷ್ಟು ತೊಂದರೆಯಾಗುತ್ತದೆ. ಡಿ ಗ್ರೇಡ್ ಆದೇಶದಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಎಂಬುದನ್ನು ಗಮನಿಸಿ ಕೂಡಲೇ ಸರಕಾರ ಡಿ.ಗ್ರೆಡ್ ಮಾಡಿದ ಆದೇಶ ಹಿಂಪಡೆಯಬೇಕು ಎಂದು ಒತ್ತಾಯಿಸಿದರು. ಸರಕಾರ ಕೂಡಲೇ ಗಡಿಕೇಶ್ವಾರ ಸಮುದಾಯ ಆರೋಗ್ಯ ಕೇಂದ್ರದ ಡಿ ಗ್ರೇಡ್ ಆದೇಶವನ್ನು ಹಿಂಪಡೆಯದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಪ್ರಕಾಶ ರಂಗನೂರ್, ಮಲ್ಲಿಕಾರ್ಜುನ ಕೋಡದೂರ್, ಗಡಿಕೇಶ್ವಾರ, ರಾಯಕೋಡ, ಭತಪುರ, ಚಿಂತಪಳ್ಳಿ, ರುದನೂರ, ಚಿಂತಪಳ್ಳಿ ತಾಂಡಾ, ಕೆರೋಳ್ಳಿ, ಬೆನಕನಹಳ್ಳಿ ಭಂಟನಹಳ್ಳಿ, ತೇಗಲತಿಪ್ಪಿ, ಹಲಚೇರಾ ಸೇರಿದಂತೆ ಗ್ರಾಮದ ಇತರ ಮುಖಂಡರು ಭಾಗವಹಿಸಿದ್ದರು.