ಕಾಳಗಿ | ಕೆಪಿಎಸ್ ಮ್ಯಾಗ್ನೆಟ್ ಶಾಲೆ ಹೆಸರಿನಲ್ಲಿ ಸರಕಾರಿ ಶಾಲೆ ವಿಲೀನಕ್ಕೆ ವಿರೋಧ
ಮುಛಖೇಡ ಗ್ರಾಮದಲ್ಲಿ ಎಐಡಿಎಸ್‌ಒ ನೇತೃತ್ವದಲ್ಲಿ ಪ್ರತಿಭಟನೆ
ಕಾಳಗಿ : ಕೆಪಿಎಸ್ (ಕರ್ನಾಟಕ ಪಬ್ಲಿಕ್ ಸ್ಕೂಲ್) ಮ್ಯಾಗ್ನೆಟ್ ಶಾಲೆ ಎಂಬ ಹೆಸರಿನಲ್ಲಿ ರಾಜ್ಯ ಸರ್ಕಾರ 40 ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸುವ ಮೂಲಕ ಮುಚ್ಚಲು ಮುಂದಾಗಿದೆ ಎಂದು ಆರೋಪಿಸಿ, ತಾಲೂಕಿನ ಮುಛಖೇಡ ಗ್ರಾಮದಲ್ಲಿ ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆಯ ನೇತೃತ್ವದಲ್ಲಿ ಭಾನುವಾರ ಪ್ರತಿಭಟನೆ ನಡೆಯಿತು.
ಕೋರವಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಮ್ಯಾಗ್ನೆಟ್ ಶಾಲೆಯಾಗಿ ಗುರುತಿಸಿ, ಮುಛಖೇಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಕೆಪಿಎಸ್‌ಗೆ ವಿಲೀನಗೊಳಿಸಿ ಸಂಪೂರ್ಣವಾಗಿ ಮುಚ್ಚಲು ಸರ್ಕಾರ ಮುಂದಾಗಿರುವುದನ್ನು ಖಂಡಿಸಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಎಐಡಿಎಸ್‌ಒ ಜಿಲ್ಲಾ ಕೌನ್ಸಿಲ್ ಅಧ್ಯಕ್ಷ ತುಳಜರಾಮ ಎನ್.ಕೆ. ಅವರು, “ರಾಜ್ಯ ಸರ್ಕಾರವು ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳ ಹೆಸರಿನಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚಲು ಸಿದ್ಧತೆ ನಡೆಸುತ್ತಿದೆ. ಈಗಾಗಲೇ ಮುಛಖೇಡ ಗ್ರಾಮಕ್ಕೆ ಬಸ್ ಸೌಲಭ್ಯವಿಲ್ಲ. ಇಲ್ಲಿನ ಹೈಸ್ಕೂಲ್ ವಿದ್ಯಾರ್ಥಿಗಳು ಕೋರವಾರಕ್ಕೆ ದಿನವೂ ನಡೆದುಕೊಂಡು ಹೋಗುತ್ತಿದ್ದಾರೆ. ಈ ಶಾಲೆಯನ್ನು ಮುಚ್ಚಿದರೆ, ಬಡ ಮಕ್ಕಳಿಗೆ 4 ಕಿ.ಮೀ ದೂರದ ಶಾಲೆಗೆ ಹೋಗಲು ಸಾಧ್ಯವಾಗದೆ ಶಿಕ್ಷಣದಿಂದ ವಂಚಿತರಾಗುತ್ತಾರೆ” ಎಂದು ಹೇಳಿದರು.
“ಈ ಯೋಜನೆಗಾಗಿ ಸರ್ಕಾರ ಏಷಿಯನ್ ಡೆವಲಪ್ಮೆಂಟ್ ಬ್ಯಾಂಕ್‌ನಿಂದ ಈಗಾಗಲೇ 2,000 ಕೋಟಿ ರೂ. ಸಾಲ ಪಡೆದಿದ್ದು, ಮತ್ತಷ್ಟು 10,000 ಕೋಟಿ ರೂ. ಸಾಲ ಪಡೆಯಲು ಚಿಂತನೆ ನಡೆಸುತ್ತಿದೆ. ಇದರ ಮೂಲಕ ಸಂಪೂರ್ಣ ಶಿಕ್ಷಣ ವ್ಯವಸ್ಥೆಯನ್ನು ಕಾರ್ಪೊರೇಟ್‌ಗಳ ಕೈಗೆ ಒಪ್ಪಿಸುವ ಪ್ರಯತ್ನ ನಡೆಯುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ 200 ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳನ್ನು ಗುರುತಿಸಲಾಗಿದ್ದು, ಈ ಭಾಗದ ಅಭಿವೃದ್ಧಿಗಾಗಿ ಮೀಸಲಾದ ಕೆಕೆಆರ್‌ಡಿಬಿ ಅನುದಾನವನ್ನು 2,000ಕ್ಕೂ ಹೆಚ್ಚು ಶಾಲೆಗಳನ್ನು ಮುಚ್ಚಲು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ಆದ್ದರಿಂದ ರಾಜ್ಯದ ಒಂದೇ ಒಂದು ಸರ್ಕಾರಿ ಶಾಲೆಯನ್ನೂ ಮುಚ್ಚಲು ಬಿಡಬಾರದು ಎಂದು ಅವರು ಕರೆ ನೀಡಿದರು.
ಪ್ರತಿಭಟನೆಯ ಮುಂದಾಳತ್ವವನ್ನು ಎಐಡಿಎಸ್‌ಒ ಜಿಲ್ಲಾ ಉಪಾಧ್ಯಕ್ಷ ಗೋವಿಂದ ಯಳವರ ವಹಿಸಿದ್ದರು.
ಗ್ರಾಮದ ಹಿರಿಯರಾದ ಸಿರಾಜ್ ಪಟೇಲ್, ರಾಮು, ಸಾಬಣ್ಣ, ಶ್ರೀಮಂತ, ಮಶಾಕ್ ಪಟೇಲ್, ಇಸಾಕ್ ಪಟೇಲ್, ಲಕ್ಷ್ಮಣ, ಅಂಬರಾಯ, ಸುರೇಶ್ ಸೇರಿದಂತೆ ಅನೇಕ ವಿದ್ಯಾರ್ಥಿಗಳು, ಪೋಷಕರು ಭಾಗವಹಿಸಿ ನವೋದಯ ಹಾಗೂ ಸ್ವಾತಂತ್ರ್ಯ ಹೋರಾಟದ ಮಹಾನ್ ನಾಯಕರ ಭಾವಚಿತ್ರಗಳನ್ನು ಹಿಡಿದು ಘೋಷಣೆ ಕೂಗಿದರು.