×
Ad

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ; “ಹವಾಮಾನ ಬದಲಾವಣೆ – ಮಹಿಳೆಯರ ಮೇಲೆ ಪರಿಣಾಮ” ಚರ್ಚಾಗೋಷ್ಠಿ

Update: 2026-03-10 11:35 IST

ಕಲಬುರಗಿ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಗುಲ್ಬರ್ಗಾ ವಿಶ್ವವಿದ್ಯಾಲಯದ ಪ್ರಾಣಿಶಾಸ್ತ್ರ ವಿಭಾಗದ ಹಳೆಯ ವಿದ್ಯಾರ್ಥಿಗಳ ವತಿಯಿಂದ “ಹವಾಮಾನ ಬದಲಾವಣೆ- ಮಹಿಳೆಯರ ಮೇಲಿನ ಪರಿಣಾಮ” ವಿಷಯದ ಕುರಿತು ವಿಶೇಷ ಚರ್ಚಾಗೋಷ್ಠಿಯನ್ನು ಆಯೋಜಿಸಲಾಯಿತು.

ಕಾರ್ಯಕ್ರಮದಲ್ಲಿ ವಿಭಾಗದ ಏಳು ಮಂದಿ ಹಳೆಯ ವಿದ್ಯಾರ್ಥಿಗಳು ಭಾಗವಹಿಸಿ ಹವಾಮಾನ ಬದಲಾವಣೆ ಮಹಿಳೆಯರ ಜೀವನದ ವಿವಿಧ ಕ್ಷೇತ್ರಗಳ ಮೇಲೆ ಬೀರುವ ಪರಿಣಾಮಗಳ ಕುರಿತು ಚರ್ಚಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಾಣಿಶಾಸ್ತ್ರ ವಿಭಾಗದ ಉಪನ್ಯಾಸಕಿ ಕೆ.ಎಸ್. ಐಶ್ವರ್ಯ ಅವರು, ಹವಾಮಾನ ಬದಲಾವಣೆಯ ಪರಿಣಾಮಗಳು ಮಹಿಳೆಯರ ಮೇಲೆ ಹೆಚ್ಚು ಕಾಣಿಸಿಕೊಳ್ಳುತ್ತಿವೆ. ಜಾಗತಿಕ ಮಟ್ಟದಲ್ಲಿ ಲಿಂಗ ಅಸಮಾನತೆ ಇನ್ನೂ ಮುಂದುವರೆದಿದ್ದು, ಮಹಿಳೆಯರು ಪುರುಷರಿಗಿಂತ ಕಡಿಮೆ ಸಂಪತ್ತನ್ನು ಹೊಂದಿರುವುದು ಹಲವು ವರದಿಗಳಿಂದ ತಿಳಿದುಬಂದಿದೆ ಎಂದು ಹೇಳಿದರು.

ಮಹಿಳೆಯರು ಬಡವರ್ಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗುರುತಿಸಿಕೊಳ್ಳುವುದರಿಂದ ಹವಾಮಾನ ಬದಲಾವಣೆಯ ಪರಿಣಾಮಗಳಿಗೆ ಹೆಚ್ಚು ಒಳಗಾಗುತ್ತಾರೆ ಎಂದು ಅವರು ತಿಳಿಸಿದರು.

ಹವಾಮಾನ ಬದಲಾವಣೆ ಮಹಿಳೆಯರ ಮೇಲೆ ಆರ್ಥಿಕವಾಗಿ ಮಾತ್ರವಲ್ಲದೆ ಆರೋಗ್ಯದ ದೃಷ್ಟಿಯಿಂದಲೂ ಪರಿಣಾಮ ಬೀರುತ್ತದೆ. ಬರ, ತೀವ್ರ ಶಾಖದ ಅಲೆಗಳು ಹಾಗೂ ಇತರ ಪ್ರಕೃತಿ ವಿಪತ್ತುಗಳ ಸಂದರ್ಭಗಳಲ್ಲಿ ಮಹಿಳೆಯರು ನಾನಾ ಆರೋಗ್ಯ ಸಮಸ್ಯೆಗಳಿಗೆ ಒಳಗಾಗುವ ಸಾಧ್ಯತೆ ಹೆಚ್ಚಿದೆ ಎಂದು ಅಭಿಪ್ರಾಯಪಟ್ಟರು.

ಮಹಿಳೆಯರು ತಮ್ಮ ಆರೋಗ್ಯಕ್ಕೆ ಆದ್ಯತೆ ನೀಡಬೇಕು, ಆರೋಗ್ಯ ವಿಮೆ ಪಡೆದುಕೊಳ್ಳಬೇಕು, ತುರ್ತು ನಿಧಿಯನ್ನು ನಿರ್ಮಿಸಬೇಕು ಹಾಗೂ ಪರಸ್ಪರ ಬೆಂಬಲಿಸುವ ಸಮುದಾಯಗಳನ್ನು ರೂಪಿಸಬೇಕು ಎಂದು ಐಶ್ವರ್ಯ ಅವರು ಸಲಹೆ ನೀಡಿದರು. ಮಹಿಳೆಯರ ಹಕ್ಕುಗಳಿಗಾಗಿ ಧ್ವನಿಯನ್ನು ಎತ್ತಿ ಸಮಾಜದಲ್ಲಿ ಜಾಗೃತಿ ಮೂಡಿಸುವುದು ಅಗತ್ಯ ಎಂದು ಕರೆ ನೀಡಿದರು.

ಚರ್ಚಾಗೋಷ್ಠಿಯಲ್ಲಿ ಡಾ. ನಂದಿನಿ ವಿಠಲರಾವ್, ಶ್ರೀದೇವಿ ಭಂಡಾರಿಮಠ, ಲಕ್ಷ್ಮಿ ಪೂಜಾರಿ, ಡಾ. ಅನಿತಾ ಹರ್ವಾಲ್, ಕರುಣಾ ಇಂಗಿನ್ ಹಾಗೂ ಅಶ್ವಿನಿ ರಾಥೋಡ್ ಭಾಗವಹಿಸಿ ಮಹಿಳೆಯರು ಪ್ರಕೃತಿಯೊಂದಿಗೆ ಮರುಸಂಪರ್ಕ ಸಾಧಿಸುವುದು ಹಾಗೂ ಹವಾಮಾನ ಸವಾಲುಗಳನ್ನು ಎದುರಿಸಲು ಸ್ಥಿತಿಸ್ಥಾಪಕತೆಯನ್ನು ಬಲಪಡಿಸುವ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News