ʼವಾರ್ತಾಭಾರತಿʼಯ 23ನೇ ವಾರ್ಷಿಕ ವಿಶೇಷಾಂಕ, ಆಯ್ದ ಸಂಪಾದಕೀಯಗಳ ಸಂಗ್ರಹ, ಕಲ್ಯಾಣ ಕರ್ನಾಟಕ ವಿಶೇಷ ಪುರವಣಿ ಬಿಡುಗಡೆ
ಕಲ್ಯಾಣ ಕರ್ನಾಟಕ ಆವೃತ್ತಿ ಲೋಕಾರ್ಪಣೆ
ಕಲಬುರಗಿ : 'ವಾರ್ತಾಭಾರತಿ' ಕನ್ನಡ ದೈನಿಕದ ಕಲ್ಯಾಣ ಕರ್ನಾಟಕ ಆವೃತ್ತಿ ಲೋಕಾರ್ಪಣೆ, 23ನೇ ವಾರ್ಷಿಕ ವಿಶೇಷಾಂಕ, ಆಯ್ದ ಸಂಪಾದಕೀಯಗಳ ಸಂಗ್ರಹ ಹಾಗೂ ಕಲ್ಯಾಣ ಕರ್ನಾಟಕ ವಿಶೇಷ ಪುರವಣಿ ಬಿಡುಗಡೆ ಕಾರ್ಯಕ್ರಮ ಶನಿವಾರ ಇಲ್ಲಿನ ಡಾ.ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಅದ್ದೂರಿಯಾಗಿ ನೆರವೇರಿತು.
ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ ಡಾ.ಯು.ಟಿ.ಖಾದರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
'THE WIRE' ಪ್ರಧಾನ ಸಂಪಾದಕ ಸಿದ್ಧಾರ್ಥ್ ವರದರಾಜನ್ ಅವರು ʼವಾರ್ತಾಭಾರತಿʼ ಕಲ್ಯಾಣ ಕರ್ನಾಟಕ ಆವೃತ್ತಿಯನ್ನು ಲೋಕಾರ್ಪಣೆ ಮಾಡಿದರು.
23ನೇ ವಾರ್ಷಿಕ ವಿಶೇಷಾಂಕವನ್ನು ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ಬಿಡುಗಡೆಗೊಳಿಸಿದರು.
ʼವಾರ್ತಾಭಾರತಿ'ಯ ಆಯ್ದ ಸಂಪಾದಕೀಯ ಸಂಗ್ರಹಗಳ ಪುಸ್ತಕವನ್ನು ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಹಾಗೂ ಆಳಂದ ಶಾಸಕ ಬಿ.ಆರ್.ಪಾಟೀಲ್ ಬಿಡುಗಡೆಗೊಳಿಸಿದರು.
'ಕಲ್ಯಾಣ ಕರ್ನಾಟಕ ವಿಶೇಷ' ಆವೃತ್ತಿಯ ಪುರವಣಿಯನ್ನು ರಾಜ್ಯ ಪೌರಾಡಳಿತ ಮತ್ತು ಹಜ್ ಸಚಿವ ರಹೀಮ್ ಖಾನ್ ಬಿಡುಗಡೆಗೊಳಿಸಿದರು.
ರಾಜ್ಯ ವಕ್ಫ್ ಮಂಡಳಿಯ ಅಧ್ಯಕ್ಷ ಹಾಗೂ ಖ್ವಾಜಾ ಬಂದೇ ನವಾಝ್ ದರ್ಗಾದ ಸಜ್ಜಾದಾ ನಶೀನ್ ಹಝ್ರತ್ ಸೈಯದ್ ಮುಹಮ್ಮದ್ ಅಲಿ ಅಲ್ ಹುಸೈನಿ, ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಆಳಂದದ ತೋಂಟದಾರ್ಯ ಅನುಭವ ಮಂಟಪದ ಕೋರಣೇಶ್ವರ ಮಹಾಸ್ವಾಮೀಜಿ, ಕಲಬುರಗಿ ಬಿಷಪ್ ರೆ.ಫಾ.ರಾಬರ್ಟ್ ಮಿರಾಂಡ, ಆಣದೂರಿನ ಪೂಜ್ಯ ಭಂತೆ ವರಜ್ಯೋತಿ, ಸಾಮಾಜಿಕ ಹೋರಾಟಗಾರ್ತಿ ಕೆ.ನೀಲಾ, ರೈತ ಸಂಘದ ಮುಖಂಡ ಚಾಮರಸ ಮಾಲಿ ಪಾಟೀಲ್, ಡಿಎಸ್ಎಸ್ ರಾಜ್ಯ ಸಂಚಾಲಕ ಡಿ.ಜಿ.ಸಾಗರ್, ಹೋರಾಟಗಾರ, ಗಾಯಕ ಅಂಬಣ್ಣ ಆರೋಲಿಕರ್ ವಿಶೇಷ ಅತಿಥಿಗಳಾಗಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
"ವಾರ್ತಾಭಾರತಿ ಸಮಾಜದಲ್ಲಿ ಅಶಕ್ತರಾಗಿರುವ, ಧ್ವನಿ ಇಲ್ಲದವರ ಧ್ವನಿಯಾಗಿದೆ. ರಾಜ್ಯದ ಸರ್ವ ಜನರ ಪ್ರೀತಿ, ವಿಶ್ವಾಸ ಹಾಗೂ ನಂಬಿಕೆಯನ್ನು ಗಳಿಸಿರುವ ವಾರ್ತಾಭಾರತಿ, ಮಾಧ್ಯಮ ಕ್ಷೇತ್ರದಲ್ಲಿ ತನ್ನದೇ ಚಾಪನ್ನು ಮೂಡಿಸಿದೆ. ಇಂತಹ ಪತ್ರಿಕೆ ಇದೀಗ ಕಲ್ಯಾಣ ಕರ್ನಾಟಕ ಭಾಗಕ್ಕೆ ತಲುಪುತ್ತಿರುವುದು ಸಂತೋಷದ ಸಂಗತಿ. ರಾಜಕೀಯ ಮತ್ತು ಯಾವುದೇ ಆಸೆ ಆಮಿಷಗಳಿಗೆ ಕೈಯೊಡ್ಡದ ಪತ್ರಿಕೆಯಾಗಿರುವ ವಾರ್ತಾಭಾರತಿ, ನೊಂದವರ ಬಾಳಿನ ಬೆನ್ನೆಲುಬಾಗಿ ಇದೇ ರೀತಿ ನಿರಂತರವಾಗಿ ಕಾರ್ಯನಿರ್ವಹಿಸಲಿ"
ಯು.ಟಿ.ಖಾದರ್, ವಿಧಾನಸಭೆ ಸಭಾಧ್ಯಕ್ಷರು
"ಪತ್ರಿಕೆ ನಡೆಸುವುದು ಇಂದು ಸುಲಭವಲ್ಲ. ಮಾಧ್ಯಮ ಕ್ಷೇತ್ರ ಇಂದು ಉದ್ಯಮ, ದಂಧೆಯಾಗಿದೆ. ಇವೆಲ್ಲದರ ಮಧ್ಯೆ ವಾರ್ತಾಭಾರತಿ ತನ್ನ 23 ವರ್ಷಗಳ ಪಯಣದಲ್ಲಿ ಪಾವಿತ್ರ್ಯತೆ, ಪ್ರಾಮಾಣಿಕತೆ, ಬದ್ಧತೆಯನ್ನು ಕಾಪಾಡಿಕೊಂಡು ಬಂದಿದೆ. ಮುಂದೆಯೂ ಇದೇ ಹಾದಿಯಲ್ಲಿ ಯಶಸ್ವಿಯಾಗಿ ಸಾಗಲಿದೆ ಎಂಬ ವಿಶ್ವಾಸವಿದೆ. ಕಲಬುರಗಿಯಲ್ಲಿ ಹೋರಾಟಗಳೇ ಹೆಚ್ಚು ನಡೆಯುತ್ತಾ ಇರುತ್ತವೆ. ಈ ಭಾಗದಲ್ಲಿ ಸಮಸ್ಯೆಗಳು ಅಧಿಕವಾಗಿರುವುದೇ ಇದಕ್ಕೆ ಕಾರಣ. ವಾರ್ತಾಭಾರತಿ ಇಲ್ಲಿನ ಜನರ ಸಮಸ್ಯೆಗಳನ್ನು, ನೋವುಗಳನ್ನು ಸರಕಾರದ ಗಮನಕ್ಕೆ ತಂದು ಅವುಗಳ ಪರಿಹಾರಕ್ಕೆ ಪೂರಕವಾಗಿ ಸಹಾಯ ಮಾಡಲಿ"
ಬಿ.ಆರ್.ಪಾಟೀಲ್, ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಹಾಗೂ ಆಳಂದ ಶಾಸಕರು